ಟೈಪ್ 1 ಡಯಾಬಿಟಿಸ್ ಫೌಂಡೇಶನ್ ಆಫ್ ಇಂಡಿಯಾ ಸ್ಥಾಪನೆ
ಬೆಂಗಳೂರು: ಭ್ರಷ್ಟಾಚಾರಕ್ಕಿಂತ ದೊಡ್ಡ ಪಿಡುಗು ಅನಾರೋಗ್ಯ ಆಗಿದ್ದು, ಈ ಬಗ್ಗೆ ಸಂಶೋಧನೆ ಮತ್ತು ಸಮಸ್ಯೆ ನಿವಾರಿಸಲು ಪ್ರಾಧಿಕಾರ ರಚಿಸುವ ಅವಶ್ಯಕತೆ ಇದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥನಾರಾಯಣ ಹೇಳಿದರು.
ನಗರದಲ್ಲಿಂದು ಅರಮನೆ ರಸ್ತೆಯ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಟೈಪ್ 1 ಡಯಾಬಿಟಿಸ್ ಫೌಂಡೇಶನ್ ಆಫ್ ಇಂಡಿಯಾದ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಧುಮೇಹ ಎನ್ನುವುದು ಸದ್ದಿಲ್ಲದೆ ಕೊಲ್ಲುವಂತ ಕಾಯಿಲೆ. ಇದು ಜೀವ ಹಾಗೂ ಜೀವನ ಎರಡನ್ನೂ ಹಿಂಡಿ ಹಿಪ್ಪೆ ಮಾಡಿ ಬಿಡುತ್ತದೆ. ಇಂದು ಪಟ್ಟಣ ಮಾತ್ರವಲ್ಲ ಗ್ರಾಮೀಣ ಪ್ರದೇಶವನ್ನು ಈ ಕಾಯಿಲೆ ಆವರಿಸಿದೆ. ಮಕ್ಕಳಲ್ಲೂ ಕಂಡುಬರುತ್ತಿರುವುದು ಆತಂಕದ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.
ಆಧುನಿಕ ಯುಗದಲ್ಲಿ ದೇಹಕ್ಕೆ ಸಾಕಷ್ಟು ವ್ಯಾಯಾಮ ಹಾಗೂ ಸಮತೋಲನ ಆಹಾರ ಸಿಗುತ್ತಿಲ್ಲ. ಇದರ ಫಲವಾಗಿ ನಾನಾ ರೀತಿಯ ಸಮಸ್ಯೆ ಕಾಡುತ್ತಿವೆ. ಇದರಲ್ಲಿ ಮಧುಮೇಹವೂ ಒಂದಾಗಿದೆ. ಮಧುಮೇಹ ಬರಿ ರಕ್ತ, ಮೂತ್ರದಲ್ಲಿ ಕಾಣಿಸಿಕೊಂಡು ದೇಹವನ್ನು ನಿಶಕ್ತಿ ಮಾಡುವುದಷ್ಟೆ ಅಲ್ಲದೆ, ಹೃದಯ ಸಂಬಂಧಿ ಕಾಯಿಲೆ, ಮೂತ್ರಪಿಂಡಕ್ಕೆ ಹಾನಿ, ಕಣ್ಣಿನ ತೊಂದರೆ, ನರಗಳ ದೌರ್ಬಲ್ಯ ಕಾಣಿಸಿಕೊಳ್ಳುತ್ತವೆ. ಶೇ.20 ಮಂದಿಗೆ ಮಧುಮೇಹ ಕಾಯಿಲೆಯಿದೆ ಎಂದು ತಿಳಿಸಿದರು.
ವೈದ್ಯಕೀಯ ವಲಯದಲ್ಲಿ ಎಲ್ಲೂ ಸಂಶೋಧನೆ ನಡೆಯುತ್ತಿದೆ.ಆದರೆ, ರಾಜ್ಯದಲ್ಲಿ ಸಂಶೋಧನೆ ನಡೆಯಬೇಕು ಎನ್ನುವುದು ನಮ್ಮ ಕಳಕಳಿ ಆಗಿದ್ದು, ರಾಜ್ಯ ಸರ್ಕಾರ ಈ ಬಗ್ಗೆ ಸಂಘ ಸಂಸ್ಥೆಗಳನ್ನು ಉತ್ತೇಜಿಸಲಿದೆ ಎಂದರು.
ಫೌಂಡೇಶನ್ ನ ಸಂಸ್ಥಾಪನ ಮುಖ್ಯಸ್ಥರಾದ ಕೆ.ಎಸ್ ನವೀನ್ ಮಾತನಾಡಿ, ದಿನೇ ದಿನೇ ಭಾರತವು ಡಯಾಬಿಟಿಸ್ ನ ರಾಜಧಾನಿಯಾಗಿ ಪರಿವರ್ತನೆ ಆಗುತ್ತಿದೆ. ಭಾರತ ವಿಶ್ವದಲ್ಲಿಯೇ ಡಯಾಬಿಟಿಸ್ ಕಾಯಿಲೆಯುಳ್ಳವರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಈ ಕಾಯಿಲೆ, ಮಕ್ಕಳು ಮತ್ತು ವಯಸ್ಕರಲ್ಲಿ ಹೆಚ್ಚಾಗಿ ಕಂಡುಬರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.
ಒಂದು ಮಾಹಿತಿಯ ಪ್ರಕಾರ ರಾಜ್ಯದಲ್ಲಿ 3 ಲಕ್ಷಕ್ಕೂ ಹೆಚ್ಚು ಮಕ್ಕಳಲ್ಲಿ ಈ ಟೈಪ್ 1 ಡಯಾಬಿಟಿಸ್ ಕಾಣಿಸಿಕೊಂಡಿದೆ. ತಂದೆ ತಾಯಿಗೆ ಡಯಾಬಿಟಿಸ್ ಇಲ್ಲದಿದ್ದರೂ ಮಕ್ಕಳಲ್ಲಿ ಈ ಕಾಯಿಲೆ ಕಾಣಿಸಿಕೊಳ್ಳುತ್ತಿದೆ. ಇದರ ಚಿಕಿತ್ಸಾ ವೆಚ್ಚ ದುಬಾರಿಯಾಗಿದ್ದು, ಸಾಮಾನ್ಯ ಬಡವರಿಗೆ ಈ ವೆಚ್ಚ ಭರಿಸಲು ಸಾಧ್ಯವಾಗುವುದಿಲ್ಲ.
ಇವರಿಗೆ ಸರ್ಕಾರದಿಂದಲೂ ಸಹ ಯಾವುದೇ ನೆರವು ಸಿಗುತ್ತಿಲ್ಲ. ಹೀಗಾಗಿ ಟೈಪ್ 1 ಡಯಾಬಿಟಿಸ್ ಸಮಸ್ಯೆಗಳನ್ನು ಸರ್ಕಾರಗಳ ಗಮನಕ್ಕೆ ತರುವ ಮತ್ತು ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ದೇಶದ ಮೂಲೆ ಮೂಲೆಯಲ್ಲಿರುವ ಸಣ್ಣ ಸಣ್ಣ ಡಯಾಬಿಟಿಸ್ ಫೌಂಡೇಶನ್ ಗಳನ್ನು ಒಟ್ಟುಗೂಡಿಸಿ ಟೈಪ್ 1 ಡಯಾಬಿಟಿಸ್ ಫೌಂಡೇಶನ್ ಆಫ್ ಇಂಡಿಯಾ ಸ್ಥಾಪನೆ ಮಾಡಲಾಗಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಸಂಸದರಾದ ತೇಜಸ್ವಿ ಸೂರ್ಯ, ಫೌಂಡೇಶನ್ ನ ಸದಸ್ಯರಾದ ಬೀಮಾ ಜಾನ್ ಯೂಸೇಫ್ ಪ್ರಶಾಂತ್, ಬೀನು ಸಿಂಗ್, ಕೀರ್ತಿ ಚಂದ್ರ, ಗೀತಾಂಜಲಿ ಉಪಸ್ಥಿತರಿದ್ದರು.