ಅಭಿಮಾನಿಗೆ ಅಭಯ ನೀಡಿದ ಅಪ್ಪು

ಅಭಿಮಾನಿಗೆ ಅಭಯ ನೀಡಿದ ಅಪ್ಪು

ಪುನೀತ್ ರಾಜ್ ಕುಮಾರ್.. ಕೆಲವರ ಪಾಲಿಗೆ ನಾಯಕ. ಕೆಲವರ ಪಾಲಿಗೆ ಕಲಾಸೇವಕ. ಕೆಲವರಿಗೆ ಅಣ್ಣ.. ಕೆಲವರಿಗೆ ತಮ್ಮ. ಕೆಲವರಿಗೆ ಮಗ.. ಕೆಲವರಿಗೆ ಮೊಮ್ಮಗ. ಅಭಿಮಾನಿಗಳ ಅಭಿಮಾನವೇ ಪುನೀತ್ ಗೆ ಶ್ರೀ ರಕ್ಷೆ. ಅಭಿಮಾನಿಗಳ ಅಭಿಮಾನದ ಉತ್ಸವವೇ ಪುನೀತ್ ಗೆ ದೀಕ್ಷೆ. ಹಾಗಾಗೇ, ಅಭಿಮಾನಿಗಳಲ್ಲಿ ದೇವರನ್ನ ಕಾಣುವ ಅಭಿಮಾನಿಗಳನ್ನೇ ದೇವರೆನ್ನುವ ಅಪ್ಪು ಇದೀಗ ಅಭಿಮಾನಿಯ ಖಾಯಿಲೆಗೆ ಮಮ್ಮಲ ಮರಗಿದ್ದಾರೆ. ಅಭಿಮಾನಿಯ ಬಯಕೆಯನ್ನ ಈಡೇರಿಸಿದ್ದಾರೆ. ಅಷ್ಟೇ ಅಲ್ಲ ಅಭಿಮಾನಿಯ ಪ್ರಾಣ ಉಳಿಸಲು ಮುಂದಾಗಿದ್ಧಾರೆ. ಹೌದು, ತನ್ನ ಸ್ವಂತ ಶಕ್ತಿಯಿಂದ ನಡೆಯಲಾಗದ ಸ್ಥಿತಿಯಲ್ಲಿರುವ ಆದರ್ಶ್ ಎಂಬ ಬಾಲಕನ ಚಿಕಿತ್ಸೆ ವೆಚ್ಚ ಭರಿಸಲು ಪುನೀತ್ ಮುಂದಾಗಿದ್ದಾರೆ. ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಗರದ ತಳವಾರ ಕೇರಿಯ ನಿವಾಸಿಗಳಾದ ಹನುಮಂತ ಮತ್ತು ರೇಖ ದಂಪತಿಗಳ ಮೂರು ಮಕ್ಕಳಲ್ಲಿ ಆದರ್ಶ್ ಹಿರಿಯ ಮಗ. ಎಲ್ಲ ಮಕ್ಕಳಂತೆ ಆಡಿ ಬೆಳೆಯಬೇಕಿದ್ದ ಆದರ್ಶ್ ಗೆ ಹುಟ್ಟಿದಾಗಿನಿಂದನೂ ವಿಚಿತ್ರ ಖಾಯಿಲೆ ಬೆನ್ನು ಬಿದ್ದಿದೆ. ಕೈ ಕಾಲುಗಳಲ್ಲಿ ಮತ್ತು ಕುತ್ತಿಗೆಯ ಸುತ್ತ ಬೆಳೆಯ ಬೇಕಾಗಿದ್ದ ಮಾಂಸದ ಖಂಡಗಳು ಬೆಳೆಯದೆ ಕೇವಲ ಮೂಳೆಗಳು ಮಾತ್ರ ಬೆಳೆಯುತ್ತಾ ಹೋಗುತ್ತಿವೆ. ಇದರಿಂದ ದೇಹದ ಅಂಗಾಂಗಗಳು ಒಂದಕ್ಕೊಂದು ಸಂಭಂದವೇ ಇಲ್ಲದಂತಾಗಿ ಕಳಚಿ ಬೀಳುವಂತಾಗಿವೆ. ಇದರಿಂದ ಈ ಬಾಲಕನ ಬೆಳವಣಿಗೆ ಸಂಪೂರ್ಣವಾಗಿ ಕುಗ್ಗಿ ಹೊಗಿದೆ. ಯಾವುದೇ ಒಂದು ಕಾರ್ಯವನ್ನ ತನ್ನ ಸ್ವಂತ ಶಕ್ತಿಯಿಂದ ಮಾಡಲಾಗದೇ ಬೇರೆಯವರ ಸಹಾಯವನ್ನ ಆದರ್ಶ್ ಪಡೆಯುವಂತಾಗಿದೆ. ವಿಚಿತ್ರ ಖಾಯಿಲೆಯಿಂದ ಬಳಲುತ್ತಿದ್ದರೂ ಆದರ್ಶ್ ಜೀವನೋತ್ಸಾಹ ಕುಗ್ಗಿಲ್ಲ. ಸಿನಿಮಾ ಅಂದ್ರೆ ಆದರ್ಶ್ ಗೆ ತುಂಬ ಇಷ್ಟ. ಅದ್ರಲ್ಲೂ ಪುನೀತ್ ರಾಜ್ ಕುಮಾರ್ ಅಂದ್ರೆ ಆದರ್ಶ್ ಗೆ ಎಲ್ಲಿಲ್ಲದ ಪ್ರಾಣ. ಪುನೀತ್ ಸ್ಟಂಟ್ಸ್, ಡ್ಯಾನ್ಸ್ಗೆ ಆದರ್ಶ್ ಬಹುದೊಡ್ಡ ಅಭಿಮಾನಿ. ಪುನೀತ್ ಸಿನಿಮಾ ಬಂದ್ರೆ ಸಾಕು ತಂದೆಯ ನೆರವಿನೊಂದಿಗೆ ಸಿನಿಮಾ ಥೇಟರ್ ಗೆ ಹೋಗಿ ದೇಹಕ್ಕೆ ಕಷ್ಟವಾದ್ರೂ ಸಿನಿಮಾ ನೋಡುತ್ತಾನೆ. ಇನ್ನು ತನ್ನಲ್ಲಿನ ಖಾಯಿಲೆ ಗುಣವಾದ್ರೆ ಪುನೀತ್ ರೀತಿಯಲ್ಲೇ ಬೆಳೆಯಬೇಕೆಂಬ ಕನಸು ಈ ಬಾಲಕನದ್ದು. ಆದರ್ಶ್ ಹೆತ್ತವರು ಸಿರಿವಂತರಲ್ಲ. ತಂದೆ ಆಟೋ ಚಾಲಕ. ದಿನವೀಡಿ ದುಡಿದ ಹಣದಲ್ಲಿ ಸಂಸಾರದ ನೌಕೆಯೂ ನೂಕಬೇಕು. ಮಗನ ಔಷಧಿ ವೆಚ್ಚವನ್ನೂ ಭರಿಸಬೇಕು. ಇನ್ನು ಹೆತ್ತ ಕರುಳಿಗೆ ತನ್ನ ಮಗ ಓಣಿಯ ಇತರ ಮಕ್ಕಳಂತೆ ಆಟವಾಡಬೇಕೆಂಬ ಕನಸು. ಹಾಗಾಗಿ, ರಾಜ್ಯ ಹಾಗೂ ಹೊರರಾಜ್ಯದ ಅನೇಕ ವೈದ್ಯರ ಬಳಿ ಆದರ್ಶ್ ಗೆ ಚಿಕಿತ್ಸೆಯನ್ನ ಕೊಡಿಸಿದ್ದಾರೆ. ಆದ್ರೆ ಫಲಿತಾಂಶ ಮಾತ್ರ ಶೂನ್ಯ. ವಿಧಿ ಎಷ್ಟರ ಮಟ್ಟಿಗೆ ಆದರ್ಶ್ ಮೇಲೇ ಮುನಿಸಿಕೊಂಡಿದೆ ಅಂದ್ರೆ ವೈದ್ಯರಿಗೂ ಸಹ ಇಲ್ಲಿವರೆಗೂ ಇಂಥಹದ್ದೇ ಖಾಯಿಲೆ ಎಂದು ದೃಡ ಪಡಿಸಲು ಆಗಿಲ್ಲ. ಬೇರೆ ಕಡೆ ಹೋಗಿ ಹೆಚ್ಚಿನ ಚಿಕಿತ್ಸೆ ಕೊಡಿಸಲು ಹೆತ್ತವರ ಬಳಿ ಈಗ ಹೆಚ್ಚಿನ ಕಾಸಿಲ್ಲ. ವಿಧಿಯ ಇದೇ ಆಟದ ಮುಂದೆ ಸದ್ಯಕ್ಕೆ ದಿನನಿತ್ಯ ಕಣ್ಣೀರಿನಲ್ಲೇ ಆದರ್ಶ್ ಹೆತ್ತವರು ಕೈ ತೊಳೆಯುತ್ತಿದ್ದಾರೆ. ಇದ್ರ ನಡುವೆ ಅಭಿಮಾನಿ ಆದರ್ಶ್ ಕಷ್ಟಕ್ಕೆ ಇದೀಗ ಪುನೀತ್ ರಾಜ್ ಕುಮಾರ್ ನೆರವಾಗಿದ್ದಾರೆ. ಅಭಿಮಾನಿ ಆದರ್ಶ್ ಸ್ಥಿತಿಯನ್ನ ಅರಿತ ಪುನೀತ್ ಇದೀಗ ಆದರ್ಶ್ ಕುಟುಂಬಸ್ಥರನ್ನ ಬೆಂಗಳೂರಿನ ತಮ್ಮ ಮನೆಗೆ ಕರೆಸಿ ಯೋಗಕ್ಷೇಮ ವಿಚಾರಿಸಿದ್ದಾರೆ. ಬಾಲಕನೊಂದಿಗೆ ಖುಷಿ ಖುಷಿಯಾಗಿ ಕಾಲ ಕಳೆದಿದ್ದಾರೆ. ಅಷ್ಟೇ ಅಲ್ಲ ವಿಶೇಷ ಅಭಿಮಾನಿ ಆದರ್ಶ್ ಖಾಯಲೆ ಗುಣಪಡಿಸಲು ಬೇಕಾದ ಖರ್ಚು ವೆಚ್ಚಗಳನ್ನೂ ಭರಿಸಲು ಕನ್ನಡಿಗರ ಪ್ರೀತಿಯ ದೊಡ್ಮನೆ ಹುಡುಗ ಪುನೀತ್ ರಾಜ್ ಕುಮಾರ್ ಮುಂದಾಗಿದ್ದಾರೆ. ಇದ್ರ ನಡುವೆ ಸ್ಪರ್ಶ ಆಸ್ಪತ್ರೆಯ ವೈದ್ಯರು ಆದರ್ಶ್ ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಖಾಯಿಲೆ ಪತ್ತೆ ಹಚ್ಚಲು ಮುಂದಾಗಿದ್ದಾರೆ. ಒಟ್ನಲ್ಲಿ ಆಡಿ ಎಲ್ಲರಂತೆ ಬೆಳೆಯಬೇಕಿದ್ದ ಹುಡುಗ ಆದರ್ಶ್ ಕಂಡು ಕೇಳರಿಯದ ಖಾಯಿಲೆಯಿಂದ ನರಳುತ್ತಿದ್ಧಾನೆ. ಅಭಿಮಾನಿ ಆದರ್ಶ್ ಗಿರುವ ಖಾಯಿಲೆ ಕಂಡು ಮರಗಿರುವ ಪುನೀತ್ ನೆರವಾಗುವ ಭರವಸೆಯನ್ನ ನೀಡಿದ್ಧಾರೆ. ಆಸ್ಪತ್ರೆಯ ಖರ್ಚು ವೆಚ್ಚ ಭರಿಸಲು ಮುಂದಾಗಿದ್ದಾರೆ. ದೇವರ ಆರ್ಶಿವಾದದಿಂದ ಆದರ್ಶ್ ಗುಣಮುಖವಾಗಲಿ, ಎಲ್ಲರಂತೆ ಆಗಲಿ, ಪುನೀತ್ ರಾಜ್ ಕುಮಾರ್ ಥರ ಬೆಳೆಯಬೇಕೆಂಬ ಆದರ್ಶ್ ಕನಸು ನನಸಾಗಲಿ ಅನ್ನೋದೇ ಎಲ್ಲರ ಆಶಯ.

 

Leave a Reply

Your email address will not be published. Required fields are marked *