ವಿಶ್ವದಾಖಲೆಗೆ ಸಿದ್ದರಾಗ್ತಿರೋ ಪೊಲೀಸ್ ಇನ್ಸ್‌ಪೆಕ್ಟರ್‌ ಗಣೇಶ್.

ವಿಶ್ವದಾಖಲೆಗೆ ಸಿದ್ದರಾಗ್ತಿರೋ ಪೊಲೀಸ್ ಇನ್ಸ್‌ಪೆಕ್ಟರ್‌ ಗಣೇಶ್.

ಮೌಂಟ್‌ ಎವೆರೆಸ್ಟ್‌ ಮೇಲೆ ಕರ್ನಾಟಕ ಪೊಲೀಸ್‌ ಬಾವುಟವನ್ನು ಹಾರಿಸಿದ ಕೀರ್ತಿ ಹೊಂದಿರುವ ಇನ್ಸ್‌ಪೆಕ್ಟರ್‌ ಗಣೇಶ್‌ ಇದೀಗ ವಿಶ್ವ ದಾಖಲೆಗೆ ಮುಂದಾಗಿದ್ದಾರೆ. ಮೌಂಟ್‌ ಎವರೆಸ್ಟ್‌ ಮತ್ತು ಚುಲು ರೇಂಜ್‌ ಗಳನ್ನ ಒಂದೇ ಪ್ರಯಾಣದಲ್ಲಿ ಹತ್ತುವ ಮೂಲಕ ವಿಶ್ವದಾಖಲೆ ಮಾಡಲು ಹೊರಟಿರೋ ಇವರು ಅದರ ಪೂರ್ವಭಾವಿಯಾಗಿ ಬೆಂಗಳೂರಿನಿಂದ ದೆಹಲಿಗೆ ಸುಮಾರು 2 ಸಾವಿರ ಕಿಲೋಮೀಟರ್‌ ಸೈಕಲ್‌ ಯಾತ್ರೆ ಕೈಗೊಳ್ಳಲಿದ್ದಾರೆ.

        ಸದ್ಯ ಲೋಕಾಯುಕ್ತ ವಿಶೇಷ ದಳದಲ್ಲಿ ಇನ್ಸ್‌ಪೆಕ್ಟರ್‌ ಆಗಿರುವ ಪಿ.ಎನ್‌. ಗಣೇಶ್‌ ಪೊಲೀಸ್‌ ಇಲಾಖೆಯಲ್ಲಿ ಕಳೆದ 29 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಪರ್ವತಾರೋಹಣ ಇವರ ಹವ್ಯಾಸವಾಗಿದ್ದು, ಈಗಾಗಲೇ 2 ಬಾರಿ (1995, 2005) ʻಮೌಂಟ್‌ ಎವರೆಸ್ಟ್‌ʼ ಪರ್ವತಾರೋಹಣ ಮಾಡಿದ್ದಾರೆ. ಕರ್ನಾಟಕ ಪೊಲೀಸ್‌ ಇಲಾಖೆಯ ಬಾವುಟವನ್ನು ಎವರೆಸ್ಟ್‌ ಮೇಲೆ ತೆಗೆದುಕೊಂಡು ಹೋದ ಕೀರ್ತಿಗೆ ಪಾತ್ರರಾಗಿದ್ದಾರೆ. ಇದೀಗ ಗಣೇಶ್‌ ರವರು ಮೂರನೇ ಬಾರಿಗೆ ಪರ್ವತಾರೋಹಣಕ್ಕೆ ತೆರಳುತ್ತಿದ್ದು, ಈ ಬಾರಿ ಒಂದೇ ಪ್ರಯಾಣದಲ್ಲಿ ಎರಡು ಪರ್ವತಗಳನ್ನು ಏರುವ ಮೂಲಕ ವಿಶ್ವದಾಖಲೆಗಾಗಿ ಪ್ರಯತ್ನಿಸಲಿದ್ದಾರೆ. “ಮೌಂಟ್‌ ಎವರೆಸ್ಟ್‌ ಮತ್ತು ಚುಲು ರೇಂಜ್‌” ಎರಡನ್ನೂ ಒಂದೇ ಪಯಣದಲ್ಲಿ ಹತ್ತುವ ಮೂಲಕ ಈ ಸಾಧನೆ ಮಾಡಲು ಮುಂದಾಗಿದ್ದಾರೆ. ಮಾರ್ಚ್‌ ತಿಂಗಳಲ್ಲಿ ಈ ಪರ್ವತಾರೋಹಣ ಕೈಗೊಳ್ಳಲಿದ್ದಾರೆ. ಅದರ ಪೂರ್ವಭಾವಿಯಾಗಿ ದೈಹಿಕ ಸಾಮರ್ಥ್ಯ ಪರೀಕ್ಷೆಗೆ ಒಳಪಡಲು ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ ರಾಷ್ಟ್ರ ರಾಜಧಾನಿ ದೆಹಲಿಯವರೆಗೆ ಸುಮಾರು 2 ಸಾವಿರ ಕಿಲೋ ಮೀಟರ್‌ ಸೈಕ್ಲಿಂಗ್‌ ಮಾಡಲಿದ್ದಾರೆ. 2020 ರ ಜನವರಿ 15 ರಂದು ಬೆಂಗಳೂರಿನಿಂದ ಸೈಕ್ಲಿಂಗ್‌ ಆರಂಭಿಸಿ, ಮಾರ್ಗ ಮಧ್ಯೆ ಬರುವ ಪೊಲೀಸ್‌ ಠಾಣೆಗಳಲ್ಲೇ ಉಳಿದುಕೊಂಡು, ಸ್ಥಳೀಯರಿಗೆ ತಮ್ಮ  ಪರ್ವತಾರೋಣದ ಉದ್ದೇಶವಾದ ವಿಶ್ವಮಾನವ, ವಸುದೈಕ ಕುಟುಂಬಂ ಸಂದೇಶಗಳ ಬಗ್ಗೆ ಜನರಿಗೆ ತಿಳಿಸಲಿದ್ದಾರೆ. ದೆಹಲಿಗೆ ತಲುಪಿದ ನಂತರ ಮಾನ್ಯ ರಾಷ್ಟ್ರಪತಿಗಳನ್ನ ಭೇಟಿ ಮಾಡಿ ಅವರಿಗೆ ತಮ್ಮ ಪರ್ವತಾರೋಹಣದ ಬಗ್ಗೆ ತಿಳಿಸಿ, ವಿಶ್ವದ 193 ದೇಶಗಳ ಬಾವುಟಗಳನ್ನ ತಾವು  ಪರ್ವತಾರೋಹಣಕ್ಕೆ ತೆಗೆದುಕೊಂಡು ಹೋಗಲು ರಾಷ್ಟ್ರಪತಿ ಭವನದ ಸಹಕಾರ ಕೋರಲಿದ್ದಾರೆ. ಇದರ ಜೊತೆಗೆ ಸರ್ವಧರ್ಮ ಸಮಾನತೆ ಸಾರಲು ಭಗವದ್ಗೀತೆ, ಬೈಬಲ್‌, ಕುರಾನ್‌ ಮತ್ತು ಗುರು ಗ್ರಂಥ ಸಾಹಿಬ್‌ ಧರ್ಮಗ್ರಂಥಗಳನ್ನ ವಿಶ್ವದ ಎತ್ತರದ ಶಿಖರಕ್ಕೆ ಕೊಂಡೊಯ್ಯಲಿದ್ದಾರೆ. ನೆರೆಹೊರೆಯ ರಾಜ್ಯಗಳ ನಡುವಿನ ಸಹಬಾಳ್ವೆ ಸೂಚ್ಯಕವಾಗಿ ಕರ್ನಾಟಕ, ಮಹಾರಾಷ್ಟ್ರ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಬಾವುಟಗಳನ್ನ ಸಹ ವಿಶ್ವದ ಅತ್ಯುನ್ನತ ಶಿಖರಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ.      

        ಜನವರಿ 15 ರಂದು ಗಣೇಶ್‌ ರವರು ಆರಂಭಿಸಲಿರೋ ಸೈಕ್ಲಿಂಗ್‌ ಯಾತ್ರೆಯನ್ನು ವಿಧಾನಸೌಧದ ಮುಂಭಾಗದಿಂದ ಆರಂಭಿಸಲಿದ್ದು, ಇದಕ್ಕೆ ಸ್ವತಃ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪ ಅವರು ಆಗಮಿಸಿ ಚಾಲನೆ ನೀಡಲು ಒಪ್ಪಿಗೆ ನೀಡಿರುತ್ತಾರೆ.

        ಇಂದು ವಿಶ್ವದ ವಿವಿಧ ರಾಷ್ಟ್ರಗಳ ನಡುವೆ ಹಲವು ಕಾರಣಗಳಿಗೆ ಪದೇ ಪದೇ ಸಂಘರ್ಷಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ವಿಶ್ವ ಮಾನವ, ವಸುದೈಕ ಕುಟುಂಬಂ ಸಂದೇಶಗಳನ್ನ ಜಗತ್ತಿಗೆ ಸಾರಲು ಹೊರಟಿರೋ ಗಣೇಶರ ಉದ್ದೇಶ ಶ್ಲಾಘನೆಗೆ ಅರ್ಹವಾದದ್ದು. ಈ ಯಾತ್ರೆಯಲ್ಲಿ ಅವರಿಗೆ ಯಶಸ್ಸು ಸಿಗಲಿ ಎಂದು ನಾವು ಸಹ ಹಾರೈಸೋಣ. 

 

Leave a Reply

Your email address will not be published. Required fields are marked *