ಎಲ್ ಐಸಿ ಪಾಲಿಸಿ ಮೇಲೆ ಸಾಲ ಪಡೆಯುವುದು ಹೇಗೆ..?

ಎಲ್ ಐಸಿ ಪಾಲಿಸಿ ಮೇಲೆ ಸಾಲ ಪಡೆಯುವುದು ಹೇಗೆ..?

ಸಾಲದ ಅಗತ್ಯ ಯಾರಿಗೆ ಯಾವ ಸಂದರ್ಭದಲ್ಲಿ ಬರುತ್ತದೆ ಎಂದು ಹೇಳೋಕೆ ಸಾಧ್ಯವಿಲ್ಲ. ಸಾಲದ ತುರ್ತಿಗೆ ಬೀಳುವ ಮಂದಿ ಪೂರ್ವಾಪರ ಯೋಚನೆ ಮಾಡದೆ ಕೆಟ್ಟ ಮೂಲಗಳಿಂದ ಕೆಟ್ಟ ಸಾಲ ಪಡೆದುಕೊಳ್ಳುತ್ತಾರೆ. ಹೀಗೆ ಚಕ್ರಬಡ್ಡಿ ಲೆಕ್ಕಾಚಾರದವರಿಂದ ಕೈ ಸಾಲ ಮಾಡಿದಾಗ ಆ ಸಾಲದಿಂದ ಅನುಕೂಲವಾಗುವುದಕ್ಕಿಂತ ಕೈ ಸುಟ್ಟುಕೊಳ್ಳುವ ಸಾಧ್ಯತೆಯೇ ಹೆಚ್ಚು. ಹೌದು ಸಾಲ ತೆಗೆದುಕೊಳ್ಳುವಾಗ ಸರಿಯಾದ ವ್ಯಕ್ತಿಗಳಿಂದ , ಸರಿಯಾದ ಸಂಸ್ಥೆಗಳಿಂದ ಸಾಲ ಪಡೆಯುವುದು ಬಹಳ ಮುಖ್ಯ . ತುರ್ತು ಅಗತ್ಯ ಅಂತ ಬಂದಾಗ ನಮ್ಮ ಮನೆಯಲ್ಲಿರುವ ಕೆಲ ದಾಖಲೆಗಳೇ ನಮಗೆ ಸಾಲದ ಆಧಾರವಾಗುತ್ತವೆ ಎನ್ನುವುದನ್ನು ನಾವು ಅರಿತುಕೊಳ್ಳಬೇಕು. ಹೌದು,ಬಹುತೇಕರು ಎಲ್ ಐಸಿ ವತಿಯಿಂದ ಲೈಫ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿರುತ್ತಾರೆ. ಆದರೆ ಎಲ್ ಐಸಿ ಬಾಂಡ್ ಗಳ ಮೇಲೆ ಸಾಲ ಪಡೆಯಬಹುದು ಎನ್ನುವ ವಿಚಾರ ಅವರಿಗೆ ತಿಳಿದಿಲ್ಲ. ಧುತ್ತೆಂದು ಬಂದೆರಗುವ ಹಣಕಾಸಿನ ಅಗತ್ಯಗಳಿಗೆ ಎಲ್ ಐಸಿ ಬಾಂಡ್ ಗಳ ಮೇಲೆ ಸಾಲ ಪಡೆಯುವುದು ಸುಲಭ ಮತ್ತು ಸುರಕ್ಷಿತ ವಿಧಾನ ಎನ್ನುವುದರಲ್ಲಿ ಎರಡು ಮಾತಿಲ್ಲ. ಎಲ್ ಐಸಿಯ ಅನೇಕ ಜೀವ ವಿಮಾ ಪಾಲಿಸಿಗಳಲ್ಲಿ ಸಾಲ ಒದಗಿಸುವ ಸೌಲಭ್ಯ ಕಲ್ಪಿಸಲಾಗಿದೆ. ಪಾಲಿಸಿ ಮಾಡಿಸಿ ಮೂರು ವರ್ಷಗಳ ಕಾಲ ಪ್ರೀಮಿಯಂ ಕಟ್ಟಿದ್ದರೆ ನಿಮಗೆ ಸಾಲದ ಸೌಲಭ್ಯಕ್ಕೆ ಅರ್ಹರಾಗುತ್ತೀರಿ. ಸಿಂಗಲ್ ಪ್ರೀಮಿಯಂ ಪಾಲಿಸಿಗಳಾಗಿದ್ದರೆ ನೀವು ಸಾಲ ಪಡೆದುಕೊಳ್ಳಲು ಮೂರು ವರ್ಷಗಳ ಕಾಲ ಕಾಯಬೇಕಿಲ್ಲ, ಪಾಲಿಸಿ ಪಡೆದ ನಂತರದಲ್ಲಿ ತಕ್ಷಣವೇ ನಿಮಗೆ ಸಾಲ ಸಿಗುತ್ತದೆ. ಎಲ್ ಐಸಿ ಬಾಂಡ್ ಗಳ ಮೇಲೆ 15 ದಿನ , ತಿಂಗಳು , ಎರಡು ತಿಂಗಳ ಲೆಕ್ಕದಲ್ಲಿ ಸಾಲ ಪಡೆಯಲು ಸಾಧ್ಯವಿಲ್ಲ. ಇಲ್ಲಿ ಸಾಲ ಪಡೆಯುವ ಕನಿಷ್ಠ ಅವಧಿಯನ್ನು 6 ತಿಂಗಳಿಗೆ ಸೀಮಿತಗೊಳಿಸಲಾಗಿದೆ.

ಪಾಲಿಸಿ ಮೇಲಿನ ಲೋನ್ ಗಳಿಗೆ ಸದ್ಯ ಶೇ. 9 ರಿಂದ ಶೇ. 10 ರಷ್ಟು ವಾರ್ಷಿಕ ಬಡ್ಡಿ ದರ ನಿಗದಿಪಡಿಸಲಾಗುತ್ತಿದೆ. ಪಾಲಿಸಿ ಸರೆಂಡರ್ ವ್ಯಾಲ್ಯೂನ ಶೇ. 70 ರಿಂದ ಶೇ. 90 ರಷ್ಟು ಸಾಲವನ್ನು ಎಲ್ ಐಸಿ ನೀಡುತ್ತದೆ. ನೀವು ಸರಿಯಾದ ಸಮಯಕ್ಕೆ ಪ್ರೀಮಿಯಂ ಪಾವತಿಸಿದ್ದರೆ ಗರಿಷ್ಠ ಸಾಲ ಸಿಗುವ ಸಾಧ್ಯತೆ ಹೆಚ್ಚಾಗುತ್ತದೆ. ಬಾಂಡ್ ಮೇಲೆ ಪಡೆದ ಸಾಲ ಮರುಪಾವತಿಗೆ ಕಾಲಮಿತಿ ಇಲ್ಲ. ನಮ್ಮ ಹಣಕಾಸಿನ ಪರಿಸ್ಥಿತಿ ಚೆನ್ನಾಗಿದ್ದಾಗ ಪಾವತಿಸಬಹುದು. ಆದರೆ ಪಾಲಿಸಿಯ ಮೇಲಿನ ಸಾಲದ ಬಡ್ಡಿಯನ್ನು 6 ತಿಂಗಳಿಗೊಮ್ಮ ಪಾವತಿಸಬೇಕು.

ಬಾಂಡ್ ಮೇಲೆ ಸಾಲ ಪಡೆಯುವ ಮುನ್ನ ಗಮನಿಸಿ:

· ಎಲ್ ಐಸಿ ಬಾಂಡ್ ಗಳ ಮೇಲೆ ಸಾಲ ಪಡೆದಾಗ  ಅದನ್ನು ಮರುಪಾವತಿ ಮಾಡುವುದು ಒಳ್ಳೆಯ ತೀರ್ಮಾನ. ಬಡ್ಡಿಯ ಜತೆಗೆ ಸಾಲವನ್ನು ಸಮಯಕ್ಕೆ ಸರಿಯಾಗಿ ಪಾವತಿಸಿದಾಗ ದೊಡ್ಡ ಮಟ್ಟದ ಮೆಚ್ಯೂರಿಟಿ ಹಣ ಒಟ್ಟಿಗೆ ಕೈ ಸೇರುತ್ತದೆ.

· ಸಾಲ ಮಾಡಿದಾಗ 6 ತಿಂಗಳಿಗೆ ಒಮ್ಮೆ ಬಡ್ಡಿ ಪಾವತಿಸುವುದರಿಂದ ಚಕ್ರಬಡ್ಡಿ ವಿಧಿಸುವುದನ್ನು ತಪ್ಪಿಸಬಹುದು.

· ತುರ್ತು ಅಗತ್ಯಗಳಿಗೆ ಮಾತ್ರ ಈ ರೀತಿ ಬಾಂಡ್ ಮೇಲೆ ಸಾಲ ಪಡೆಯುವುದು ಉತ್ತಮ ನಿರ್ಧಾರವಾಗುತ್ತದೆ.  ಮೋಜು, ಮಸ್ತು , ಫಾರಿನ್ ಟೂರ್ ಮುಂತಾದ ಅನುತ್ಪಾದಕ ಕಾರಣಗಳಿಗೆ ಈ ಸಾಲ ಕೊಳ್ಳುವುದು ತಪ್ಪಾಗುತ್ತದೆ.

· ಪರ್ಸನಲ್ ಲೋನ್ ( ವೈಯಕ್ತಿಕ ಸಾಲದ) ಬಡ್ಡಿದರ ಶೇ. 12 ರಿಂದ ಶೇ. 16 ರಷ್ಟಿದೆ. ಆದಕ್ಕೆ ಪರ್ಯಾಯವಾಗಿ ಶೇ. 9 ರಿಂದ ಶೇ. 10 ರ ಬಡ್ಡಿ ದರ ಇರುವ ಎಲ್ ಐಸಿ ಬಾಂಡ್ ಲೋನ್ ಪಡೆದುಕೊಳ್ಳಬಹುದು.

· ಸಾಲ ಪಡೆಯಲು ನಿಮ್ಮ ಏಜೆಂಟ್ ಅಥವಾ ಬ್ರಾಂಚ್ ಅನ್ನು ನೇರವಾಗಿ ಸಂಪರ್ಕಿಸಬಹುದು.

· ಸಾಲಕ್ಕೆ ಆಧಾರ್ ಕಾರ್ಡ್, ಪಾನ್ ಕಾರ್ಡ್ ಮತ್ತಿತರ ಕೆವೈಸಿ ದಾಖಲೆಗಳನ್ನು ಕೇಳುತ್ತಾರೆ.

· ಸೂಕ್ತ ದಾಖಲೆಗಳನ್ನು ನೀಡಿದಲ್ಲಿ ಹೆಚ್ಚೆಂದರೆ ಒಂದು ವಾರದ ಒಳಗಾಗಿ ಈ ಸಾಲ ಲಭಿಸುತ್ತದೆ.

 

Leave a Reply

Your email address will not be published. Required fields are marked *