ಅಸಂಖ್ಯ ಪ್ರಮಥ ಗಣಮೇಳದ ಆಮಂತ್ರಣ ಪತ್ರಿಕೆ ಬಿಡುಗಡೆ
ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಚಿತ್ರದುರ್ಗ ಹಾಗೂ ಬಸವ ಕೇಂದ್ರಗಳು, ಬಸವ ಸಂಘಟನೆಗಳು, ವಿವಿಧ ಧಾರ್ಮಿಕ ಕೇಂದ್ರಗಳು ಹಾಗೂ ಸರ್ವಜನಾಂಗದ ಮಠಾಧೀಶರ ಸಹಯೋಗದೊಂದಿಗೆ ಬೆಂಗಳೂರಿನ ನಂದಿ ಮೈದಾನದಲ್ಲಿ ಫೆಬ್ರವರಿ 16ರಂದು ಶಿವಯೋಗ ಸಂಭ್ರಮ, ಅಸಂಖ್ಯ ಪ್ರಮಥರ ಗಣಮೇಳ ಮತ್ತು ಸರ್ವಶರಣರ ಸಮ್ಮೇಳನ ನಡೆಯಲಿದೆ. ಈ ಹಿನ್ನಲೆಯಲ್ಲಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಬಿ. ವೈ ವಿಜಯೇಂದ್ರ ಅವರು ಬಿಡುಗಡೆ ಮಾಡಿದ್ದಾರೆ. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾಗತಿಕ ಶಾಂತಿ ಮತ್ತು ಪ್ರಗತಿಗಾಗಿ, ಬೆಂಗಳೂರಿನಲ್ಲಿ ಇದೇ ಫೆಬ್ರವರಿ 16 ರಂದು ಭಾನುವಾರ ಬೆಳಗ್ಗೆ 8 ಗಂಟೆಯಿಂದ ಬಸವ ಕೇಂದ್ರ ಶ್ರೀ ಮುರುಘ ಮಠ, ಬಸವ ಸಂಘಟನೆಗಳು, ವಿವಿಧ ಧಾರ್ಮಿಕ ಕೇಂದ್ರಗಳು ಮತ್ತು ಸರ್ವ ಜನಾಂಗದ ಮಠಾಧೀಶರ ಸಹಯೋಗದಲ್ಲಿ ಶಿವಯೋಗ ಸಂಭ್ರಮ ಅಸಂಖ್ಯ ಪ್ರಮಥ ಗಣಮೇಳ ಹಾಗೂ ಸರ್ವಶರಣರ ಸಮ್ಮೇಳನವನ್ನು ಬೆಂಗಳೂರಿನ ನಂದಿ ಗ್ರೌಂಡ್ಸ್ ನಲ್ಲಿ ಆಯೋಜನೆ ಮಾಡಲಾಗಿದೆ. ಇದರ ಮುರುಘ ಶ್ರೀಗಳ ನೇತೃತ್ವದಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಸನ್ಮಾನ್ಯ ಶ್ರೀ ಬಿ.ಎಸ್ ಯಡಿಯೂರಪ್ಪ ಅವರು ಉದ್ಘಾಟನೆ ಮಾಡಲಿದ್ದಾರೆ. ಈ ಸಮಾರಂಭದಲ್ಲಿ ಸುತ್ತೂರು ಶ್ರೀಗಳು, ಸಿದ್ದಗಂಗಾ ಶ್ರೀಗಳು, ಧರ್ಮಸ್ಥಳ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆರವರು, ಶ್ರೀ ರವಿಶಂಕರ ಗುರೂಜಿ, ರಾಜ್ಯಮಟ್ಟದ ಧಾರ್ಮಿಕ ಮುಖಂಡರು, ಸಂತರು ಸ್ವಾಮಿಗಳಲ್ಲದೆ ಜನಾಯಕರು, ಚಿಂತಕರು, ಕಲಾವಿದರು ಮತ್ತು ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಬರುವ ಲಕ್ಷಾಂತರ ಜನರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.
ಇನ್ನು ಇದೇ ವೇಳೆ ಶ್ರೀ ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಲಕ್ಷದ ಮೇಲೆ ತೊಂಬತ್ತಾರು ಸಾವಿರ ಗಣಂಗಳು ಸಮಾವೇಶಗೊಂಡಿದ್ದರೆಂಬುದು ಒಂದು ಇತಿಹಾಸ. ಅದೇ ರೀತಿ 21 ನೇ ಶತಮಾನದಲ್ಲಿ ಅಂತಹ ಒಂದು ಚಾರಿತ್ರಿಕ ಘಟನೆಗೆ ಸಾಕ್ಷಿ ಆಗಬೇಕೆಂಬ ಉದ್ದೇಶದಿಂದ ಫೆಬ್ರವರಿ 16ನೇ ತಾರೀಕು ಭಾನುವಾರ ಅಸಂಖ್ಯ ಪ್ರಮಥ ಗಣಮೇಳ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ನಮ್ಮ ಕಾರ್ಯಕ್ರಮ ಜಾತ್ಯತೀತ, ಪಕ್ಷಾತೀತವಾಗಿದ್ದು, ಬಸವಣ್ಣ ಅವರ ಆಶಯದಂತೆ ಈ ಗಣಮೇಳವನ್ನು ಸಂಘಟಿಸಿದ್ದೇವೆ. ಅಂದು ಬೆಳಗ್ಗೆ 8 ಗಂಟೆಗೆ ಶಿವಯೋಗ ಸಂಭ್ರಮ, 1.30 ಗಂಟೆಗೆ ಅಸಂಖ್ಯ ಪ್ರಮಥ ಗಣಮೇಳ, ಮಧ್ಯಹ್ನಾ 1.30 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಮಾಹಿತಿ ನೀಡಿದ್ರು.
ಬೆಂಗಳೂರಿನ ಕಾನಿಷ್ಕ ಹೋಟೆಲ್ ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶ್ರೀ ಮುರುಘಾಮಠ ಶ್ರೀಗಳಾದ ಡಾ ಶಿವಮೂರ್ತಿ ಮುರುಘಾ ಶರಣರು, ಸಿಎಂ ಬಿಎಸ್ ಯಡಿಯೂರಪ್ಪ ಅವರ ಪುತ್ರ, ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾದ ಬಿ.ವೈ ವಿಜಯೇಂದ್ರ, ಉಪಾಧ್ಯಕ್ಷರಾದ ಈ ಕೃಷ್ಣಪ್ಪ, ಉದ್ಯಮಿ ಎಸ್ ಪಿ ಜಯಣ್ಣ ಅವರು ಉಪಸ್ಥಿತರಿದ್ದರು.