ಕಲಿಯುಗದ ಪ್ರತ್ಯಕ್ಷ ದೈವ ನೆಲೆಸಿರೋ ಕ್ಷೇತ್ರವಿದು.

ಕಲಿಯುಗದ ಪ್ರತ್ಯಕ್ಷ ದೈವ ನೆಲೆಸಿರೋ ಕ್ಷೇತ್ರವಿದು.

ನಮ್ಮ ಪುರಾಣಗಳ ಪ್ರಕಾರ ಭೂವಿಯ ಮೇಲೆ 108 ತಿರುಪತಿಗಳಿವೆಯಂತೆ. ಅಂದರೆ ಸೃಷ್ಟಿಕರ್ತ ವಿಷ್ಣು ವೆಂಕಟೇಶ್ವರಸ್ವಾಮಿಯ ರೂಪದಲ್ಲಿ ನೆಲೆನಿಂತ ದಿವ್ಯ ಕ್ಷೇತ್ರಗಳಿವು. ಅಂತಹ ಮಹಿಮಾನ್ವಿತ ತಾಣಗಳ್ಲಿ ಬಂಗಾರು ತಿರುಪತಿ ಕೂಡಾ ಒಂದು. ಇದು ಅಂತಿಂಥ ತಾಣವಲ್ಲವೇ ಅಲ್ಲ. ಪುರಾಣ ಕಾಲದಿಂದಲೂ ಈ ಕ್ಷೇತ್ರಕ್ಕೆ ದಿವ್ಯ ಪರಂಪರೆಯಿದೆ. ಸಾಕಷ್ಟು ಮಹಿಮಾಪೂರ್ಣ ಹಿನ್ನೆಲೆಯಿದೆ. ಅಂಥಹ ದೈವೀ ಪ್ರಭಾವವುಳ್ಳ ಸ್ಥಳ ಈ ಆಲಯ. ಇದು ಭಗವಂತ ಮಹಿಮೆ ಮೆರೆದ ವಿಶಿಷ್ಟ ಕತೆಗೆ ಸಾಕ್ಷಿಯಾಗಿದೆ. ಇದುವೇ ಕೋಲಾರ ಜಿಲ್ಲೆಯ ಬಂಗಾರಪೇಟೆಯಿಂದ 45 ಕಿ.ಮೀ ಕ್ರಮಿಸಿದರೆ ಪ್ರತ್ಯಕ್ಷವಾಗುವ ಗುಟ್ಟಹಳ್ಳಿಯಲ್ಲಿರುವ ಬಂಗಾರು ತಿರುಪತಿ. 

ಬಂಗಾರು ತಿರುಪತಿ ಕ್ಷೇತ್ರ ಈಗಾಗಲೇ ಹೇಳಿದಂತೆ ಪುರಾಣದ ಶ್ರೀಮಂತ ಹಿನ್ನೆಲೆ ಹೊಂದಿದೆ. ಮಹಾ ತಪಸ್ವಿ, ದೈವಸಾಧಕ ಭೃಗು ಮಹರ್ಷಿಗಳ ಜೊತೆಗೆ ಈ ಕ್ಷೇತ್ರ ಬೆಸೆದುಕೊಂಡಿದೆ. ಅದೊಮ್ಮೆ ಮಹಾ ಮುಂಗೋಪಿಯಾಗಿದ್ದ ಭೃಗು ಮಹರ್ಷಿಗಳು ಶ್ರೀಮನ್ನಾರಾಯಣನನ್ನ ಕಾಣುವುದಕ್ಕೆ ವೈಕುಂಠಕ್ಕೆ ಹೋಗಿರುತ್ತಾರೆ. ಅಲ್ಲಿ ವಿಷ್ಣು ಲಕ್ಷ್ಮೀದೇವಿಯ ಸೇವೆಗೆ ಮೈ ಮರೆತು ಪವಡಿಸಿಬಿಟ್ಟಿರುತ್ತಾನೆ. ಭೃಗು ಮಹರ್ಷಿಗಳ ಕರೆ ಸ್ವಾಮಿಯನ್ನ ತಲುಪುವುದಿಲ್ಲ. ಇದರಿಂದ ಕುಪಿತಗೊಂಡ ಮಹರ್ಷಿಗಳು ನೇರವಾಗಿ ವಿಷ್ಣುವಿನ ವೃಕ್ಷಸ್ಥಳಕ್ಕೆ ಒದೆಯುತ್ತಾರೆ. ಇದರಿಂದ ಕಿಂಚಿತ್ತೂ ಕೋಪಗೊಳ್ಳದ ಭಗವಂತ ನಯವಾಗಿ ಮಾತನಾಡುತ್ತಾ, ಮಹರ್ಷಿಗಳ ಪಾದ ಸೇವೆ ಮಾಡುವ ನೆಪದಲ್ಲಿ ಅವರ ಕಾಲಿನಲ್ಲಿದ್ದ ಜ್ಞಾನ ನೇತ್ರವನ್ನ ಕಿತ್ತುಬಿಡುತ್ತಾನೆ.

ಈ ಘಟನೆಯ ತೀವ್ರತೆ ನಂತರ ಭೃಗು ಮಹರ್ಷಿಗಳಿಗೆ ಅರ್ಥವಾಗುತ್ತೆ. ಮೋಕ್ಷ ಸಿಗದ ಮುನಿಗಳು ತಮ್ಮಿಂದಾದ ಪ್ರಮಾದಕ್ಕೆ ವಿಷ್ಣುವಿನ ಬಳಿ ಕ್ಷಮೆ ಕೋರುತ್ತಾರೆ. ಆಗ ನಾರಾಯಣ ಭೃಗು ಮಹರ್ಷಿಗಳಿಗೆ ಲೋಕ ಪ್ರದಕ್ಷಿಣೆ ಮಾಡಿ ಶೇಷಾಚಲ ಅನ್ನುವ ಸ್ಥಳದಲ್ಲಿ ತಪಸ್ಸು ನಡೆಸು. ನಿನಗೆ ಪ್ರತ್ಯಕ್ಷನಾಗಿ ಮೋಕ್ಷ ನೀಡುತ್ತೇನೆ ಅಂತ ತಿಳಿಸುತ್ತಾನೆ. ಅದರಂತೆ ಭೃಗು ಮಹರ್ಷಿಗಳು ಇಲ್ಲಿಗೆ ಬಂದು ತಪಸ್ಸು ನಡೆಸಿದಾಗ ಸ್ವಾಮಿ ವಿಶೇಷ ರೂಪದಲ್ಲಿ ಪ್ರತ್ಯಕ್ಷಗೊಂಡು ಮಹರ್ಷಿಗಳಿಗೆ ಮೋಕ್ಷ ನೀಡುತ್ತಾನೆ.

ಹಾಗೇ ಮಹಾಮಹಿಮರಿಗೆ ಮೋಕ್ಷ ನೀಡಿದ ಕ್ಷೇತ್ರವಿದು. ಈ ದೇಗುಲ ಮತ್ತೊಂದು ವೈಶಿಷ್ಟ್ಯತೆಗೆ ಸಾಕ್ಷಿಯಾಗಿದೆ. ಜಗತ್ತಿನಲ್ಲಿ ಯಾವುದೇ ಆಲಯಕ್ಕೇ ಹೋದರೂ ಸ್ವಾಮಿಯನ್ನ ಸಂಪೂರ್ಣವಾಗಿ ಕಣ್ತುಂಬಿಕೊಳ್ಳಬೇಕು ಅಂತ ಭಕ್ತರು ಬಯಸುತ್ತಾರೆ. ಮುಖ್ಯದ್ವಾರದವರೆಗೂ ತೆರಳಿ ಭಗವಂತನನ್ನ ಮನತುಂಬಿಕೊಳ್ಳುತ್ತಾರೆ. ಆದ್ರೆ ಇಲ್ಲಿ ಮಾತ್ರ ಸ್ವಾಮಿಯನ್ನ ಹಾಗೇ ಪೂರ್ಣವಾಗಿ ಯಾವ ಅಡೆ ತಡೆಯಿಲ್ಲದೇ ಕಾಣುವುದಕ್ಕೆ ಸಾಧ್ಯವೇ ಇಲ್ಲ. ಈ ದೇಗುಲದಲ್ಲಿ ಭೃಗು ನೇತ್ರ ದರ್ಶನ ಅನ್ನುವ ವಿಶೇಷ ಸಂಪ್ರದಾಯವನ್ನ ಪಾಲಿಸಲಾಗುತ್ತದೆ. ಭಗವಂತನ ಎದುರಿಗೆ ಇರುವ ಆರು ಕಿರಿದಾದ ಕಿಂಡಿಗಳಲ್ಲಿಯೇ ವೆಂಕಟೇಶ್ವರ ಸ್ವಾಮಿಯನ್ನ ಕಂಡು ಧನ್ಯತೆ ಪಡೆಯಬೇಕು. ಆ ಭಗವಂತ ಇಲ್ಲಿ ಹೀಗೆ ಕಿಂಡಿಯ ಮೂಲಕ ದರ್ಶನ ನೀಡುವುದರ ಹಿಂದೆಯೂ ಒಂದು ವಿಶೇಷತೆ ಅಡಗಿದೆ.

ಈ ಕಿಂಡಿಗಳ ಹಿಂದೆಯೂ ಒಂದು ಮಹತ್ವದ ಸಂಗತಿ ಅಡಗಿದೆ. ಆರು ಕಿಂಡಿಗಳು ಮನುಷ್ಯನ ಅರಿಷಡ್ವರ್ಗಗಳನ್ನ ಪ್ರತಿನಿಧಿಸುತ್ತವೆ.  ಭಗವಂತನ ದರ್ಶನ ಮಾಡುವಾಗ ಎಲ್ಲರೂ ಅರಿಷಡ್ವರ್ಗಗಳನ್ನ  ಬಿಟ್ಟು ನಿರ್ಮಲ ಮನಸಿನಿಂದಿರಬೇಕು ಎಂಬುದನ್ನ ಇದು ಸೂಚಿಸುತ್ತದೆ. ಕಾಮ, ಕ್ರೋಧ, ಮೋಹ, ಮದ, ಮಾತ್ಸರ್ಯಗಳನ್ನ ಬಿಟ್ಟಾಗಲೇ ಮನಸಿನಲ್ಲಿ ಶುದ್ಧ ಭಕ್ತಿ ಮೂಡುವುದಕ್ಕೆ ಸಾಧ್ಯ. ಅಂತಹ ನಿರ್ಮಲ ಭಕ್ತಿಗೆ ಭಗವಂತ ಒಲಿಯುವುದು ಎಂಬುದನ್ನ ಇದು ಸೂಚಿಸುತ್ತದೆ.

ವಿಶಾಲ ಆಲಯದೊಳಗೆ ನೆಲೆಸಿರುವ ಈ ಸ್ವಾಮಿಯನ್ನ ಕಾಣುವುದೇ ಒಂದು ಆನಂದ. ಬಾನೆತ್ತರದ ಗೋಪುರದೊಳಗೆ ಪ್ರವೇಶಿಸಿ ಒಂದೊಂದೆ ಮೆಟ್ಟಿಲುಗಳನ್ನ ಏರಿ ಮೇಲೆ ಹೋದರೆ ಪುಟ್ಟ ಆಲಯದೊಳಗೆ ಸ್ವಾಮಿ ದರ್ಶನ ನೀಡುತ್ತಾನೆ. ಆಲಯದ ಮತ್ತೊಂದು ಪ್ರಮುಖ ಆಕರ್ಷಣೆಯೆಂದ್ರೆ ಬೃಹತ್ ಗರುಡ ವಿಗ್ರಹ. ವಿಶಾಲ ಗರುಡ, ಅದರ ಕಾಲಿನಲ್ಲಿ ಸಿಕ್ಕಿಹಾಕಿಕೊಂಡ ಸರ್ಪ, ಆಲಯಕ್ಕೆ ಪ್ರವೇಶಿಸಿದ ತಕ್ಷಣ ಸ್ವಾಗತಿಸುತ್ತೆ. ನಂತರ ಬೃಹತ್ ಪುಷ್ಕರಣಿ ಕಾಣಸಿಗುತ್ತೆ. ಅದರ ನಂತರ ಮೆಟ್ಟಿಲು ಏರಿ ಮೇಲೆ ಹೋಗಬೇಕು. ಹೀಗೆ ಬಂಗಾರು ತಿರುಪತಿ ಆಲಯ ಕಾಣಸಿಗುವುದು.

ಇಷ್ಟಕ್ಕೂ ಈ ಕ್ಷೇತ್ರಕ್ಕೆ ಬಂಗಾರು ತಿರುಪತಿ ಎಂದು ಹೆಸರು ಬರುವುದಕ್ಕೂ ಒಂದು ಕಾರಣವಿದೆ. ಚಿನ್ನದ ಗಣಿ ಕೆಜಿಎಫ್ ಗೆ ಹತ್ತಿರದಲ್ಲೇ ಅಂದರೆ ಕೋಲಾರ ಜಿಲ್ಲೆಯಲ್ಲಿಯೇ ಪುಣ್ಯಸ್ಥಳ ಇರುವುದರಿಂದ ಇದನ್ನ ಬಂಗಾರು ತಿರುಪತಿ ಎಂದು ಕರೆಯಲಾಗುತ್ತಿದೆ ಎಂದು ಹೇಳಲಾಗುತ್ತದೆ.

ಕೋಲಾರ ಬಳಿಯ ಗುಟ್ಟಹಳ್ಳಿಯಲ್ಲಿರುವ ಬಂಗಾರು ತಿರುಪತಿ ಭಕ್ತರ ಅರಿಷಡ್ವರ್ಗಗಳನ್ನ ನಿವಾರಿಸಿ ಮುಕ್ತಿ ನೀಡುವ ಭಕ್ತಿ ಕ್ಷೇತ್ರವಾಗಿದೆ. ಈ ಸ್ವಾಮಿ ತಿರುಮಲಕ್ಕೆ ಹೋಗಲು ಆಗದವರಿಗೆ ಇಲ್ಲಿಯೇ ದರ್ಶನ ನೀಡಿ ಅವರ ಬಾಳನ್ನ ಬೆಳಗುತ್ತಿದ್ದಾನೆ.

 

Leave a Reply

Your email address will not be published. Required fields are marked *