ನಿಮ್ಮ ಬಡತನಕ್ಕೆ ನೀವೇ ಮಾಡುವ ಈ 6 ತಪ್ಪುಗಳು ಕಾರಣ…!
‘ಬಡವರಾಗಿ ಹುಟ್ಟುವುದು ನಮ್ಮ ತಪ್ಪಲ್ಲ, ಆದರೆ ಬಡವರಾಗಿಯೇ ಸತ್ತರೆ ಅದರಲ್ಲಿ ನಮ್ಮ ತಪ್ಪಿದೆ’. ಜಗತ್ತಿನ ಅಗ್ರ ಶ್ರೀಮಂತ ವ್ಯಕ್ತಿಗಳ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಬಿಲ್ ಗೇಟ್ಸ್ ಹೇಳುವ ಮಾತಿದು. ಶ್ರೀಮಂತಿಕೆ ಯಾರ ಸ್ವತ್ತೂ ಅಲ್ಲ, ವಿವೇಚನೆಯಿಂದ ಉಳಿತಾಯ ಮಾಡಿ, ಸರಿಯಾದ ಕಡೆ ಹೂಡಿಕೆ ಮಾಡಿದರೆ ಬಡವರೂ ಶ್ರೀಮಂತಿಕೆಯತ್ತ ಸಾಗುವುದು ಅಸಾಧ್ಯದ ಮಾತೇನಲ್ಲ. ಆದರೆ ಬಹುಪಾಲು ಜನರು ಉಳಿತಾಯ ಮತ್ತು ಹೂಡಿಕೆಯ ಆರಂಭಿಕ ಹಂತದಲ್ಲೇ ಎಡವುತ್ತಾರೆ. ಈ ಹಿನ್ನೆಲೆಯಲ್ಲಿ ಬಡತನಕ್ಕೆ ಕಾರಣವಾಗುವ ಆ 6 ಕಾರಣಗಳ ವಿವರಣೆ ಇಲ್ಲಿದೆ.
1. ಸಿಗರೇಟ್, ಎಣ್ಣೆಗೆ ಅಂತಾನೇ ಲಕ್ಷಾಂತರ ರೂ. ಖರ್ಚು: ಅಣ್ಣಾ ಒಳ್ಳೆ ದುಡಿಮೆ ಮಾಡ್ತೀನಿ ಕಣೋ ಆದ್ರೆ ದುಡ್ಡೇ ಉಳಿಯಲ್ಲ ಅಂತ ಕೊರಗೋ ಸಾಕಷ್ಟು ಮಂದಿ ನಮ್ಮ ಮಧ್ಯೆ ಇದ್ದಾರೆ. ಆದರೆ ಇದಕ್ಕೆ ಪ್ರಮುಖ ಕಾರಣ ಡ್ರಿಂಕ್ಸ್ ಮತ್ತು ಸಿಗರೇಟ್. ಇದೇನ್ ತಮಾಷೆ ಮಾಡ್ತಿದ್ದೀರಾ ಅಂತ ನೀವು ಕೇಳಬಹುದು. ಆದ್ರೆ ನಿಜವಾಗ್ಲೂ ಒಪನ್ ದ ಬಾಟಲ್ ಟಲ್ , ಟಲ್ ಟಲ್ , ಧಮ್ ಮಾರೋ ಧಮ್ ಅಂತ ಮಜಾ ಉಡಾಯಿಸಿದ್ರೆ ನಿಮ್ಮ ಬ್ಯಾಂಕ್ ನಲ್ಲಿರೋ ದುಡ್ಡು ಸರಕ್ ಅಂತ ಕೆಳಗಿಳಿಯೋದು ಗ್ಯಾರಂಟಿ. ಕೂಡಿಯೋಕೆ ಧಮ್ ಎಳೆಯೋಕೆ ಅಂದ್ರೆ ನಿಮಗೆ ಊರ್ ತುಂಬಾ ಸ್ನೇಹಿತರು ಹುಟ್ಟಿಕೊಳ್ತಾರೆ. ಅವರನ್ನ ಜತಗೆ ಕರ್ಕೊಂಡು ಹೋಗಿ ಧಮ್ ಎಳೆಸಿ , ಕುಡಿಸಿ ಕಳುಹಿಸೋ ಹೊತ್ತಿಗೆ ದುಡಿದ ದುಡ್ಡು ಯಾವ ಮೂಲೆ ಸೇರುತ್ತೆ ಅನ್ನೋದು ಗೊತ್ತೇ ಆಗೋಲ್ಲಾ. ಸಿಗರೇಟ್ ಗೆ ಎಣ್ಣೆಗೆ ವರ್ಷಕ್ಕೆ ಎಷ್ಟು ದುಡ್ಡು ಸುಡ್ತೀರಿ ಅನ್ನೋ ಅಂದಾಜು ಈ ಕೆಳಗಿನ ಪಟ್ಟಿಯಲ್ಲಿದೆ.ಇದನ್ನು ನೋಡಿದ ಮೇಲಾದ್ರೂ ಅಡಿಕ್ಟ್ ಆಗಿರೋರು ಎಚ್ಚೆತ್ಕೊಳ್ಳಿ.
ದಿನಕ್ಕೆ 300 ರೂಪಾಯಿಗೆ ಕುಡಿದ್ರೂ ವರ್ಷಕ್ಕೆ 1 ಲಕ್ಷ ರೂಪಾಯಿ ಬೇಕು | |
ದಿನದ ಕುಡಿತದ ಖರ್ಚು | ರೂ. 300 |
ವಾರದ ಕುಡಿತದ ಖರ್ಚು | ರೂ. 2100 |
ತಿಂಗಳ ಕುಡಿತದ ಖರ್ಚು | ರೂ. 9000 |
1 ವರ್ಷದ ಕುಡಿತದ ಖರ್ಚು | ರೂ. 1,09,500 |
ದಿನಕ್ಕೆ 100 ರೂ. ಸಿಗರೇಟ್ ಗೆ ಖರ್ಚು ಮಾಡಿದ್ರೂ ವರ್ಷಕ್ಕೆ 36 ಸಾವಿರ ಬೇಕು | |
ದಿನದ ಸಿಗರೇಟ್ ಖರ್ಚು | ರೂ. 100 |
ವಾರದ ಸಿಗರೇಟ್ ಖರ್ಚು | ರೂ. 700 |
ತಿಂಗಳ ಸಿಗರೇಟ್ ಖರ್ಚು | ರೂ. 3000 |
1 ವರ್ಷದ ಕುಡಿತದ ಖರ್ಚು | ರೂ. 36,500 |
1.ಡಿಸ್ಕೌಂಟ್ ಇದೆ ಅಂತ ವಸ್ತುಗಳನ್ನು ಖದೀರಿಸೋದು: ‘ಯಾವ ವಸ್ತು ನಮಗೆ ಅನಾವಶ್ಯಕವೊ ಅದನ್ನು ಖರೀದಿಸಿದರೆ ಅವಶ್ಯಕ ವಸ್ತುಗಳನ್ನು ಮಾರಾಟ ಮಾಡಬೇಕಾಗುತ್ತದೆ’ ಎಂದು ಜಗತ್ತಿನ ಶ್ರೀಮಂತ ಹೂಡಿಕೆದಾರ ವಾರನ್ ಬಫೆಟ್ ಹೇಳುತ್ತಾರೆ. ಆದರೆ ಬಹುತೇಕರು ಡಿಸ್ಕೌಂಟ್ ಇದೆ ಎನ್ನುವ ಕಾರಣಕ್ಕೇ ಖರೀದಿ ಮಾಡುತ್ತಾರೆ. ಡಿಸ್ಕೌಂಟ್ ಇರುವಾಗ ಖರೀದಿ ಮಾಡುವುದು ತಪ್ಪಲ್ಲ, ಆದರೆ ಡಿಸ್ಕೌಂಟ್ ಇದೇ ಎನ್ನುವ ಕಾರಣಕ್ಕೇ ಅನಗತ್ಯ ವಸ್ತುಗಳನ್ನು ಖರೀದಿಸುವುದು ಮೂರ್ಖತನ. ಅನಗತ್ಯ ಶಾಪಿಂಗ್ ತಪ್ಪಿಸಲು ನೀವು ಸುಲಭವಾದ ಒಂದು ಟಿಪ್ಸ್ ಫಾಲೋ ಮಾಡಬಹುದು. ಶಾಪಿಂಗ್ ಗೆ ತೆರಳುವ ಮುನ್ನ ಯಾವೆಲ್ಲಾ ವಸ್ತಗಳನ್ನು ಖರೀದಿಸಬೇಕು ಅಂತ ಮನೆಯಲ್ಲೇ ಕುಳಿತು ಒಂದು ಪಟ್ಟಿ ಮಾಡಿಕೊಳ್ಳಿ. ಪಟ್ಟಿಯಲ್ಲಿರುವ ವಸ್ತುಗಳನ್ನು ಹೊರತುಪಡಿಸಿ ಬೇರೆಯ ವಸ್ತುಗಳನ್ನು ಖರೀದಿಸುವುದಿಲ್ಲ ಅಂತ ಕಮಿಟ್ ಆಗಿ. ಹೀಗೆ ಮಾಡಿದಾಗ ನಿಜವಾಗಲೂ ಅಗತ್ಯವೆನಿಸುವ ವಸ್ತುಗಳನ್ನು ಮಾತ್ರ ನೀವು ಖರೀದಿಸುತ್ತೀರಿ. ವಾರಕ್ಕೆ ಒಂದೊಂದು ಮಾಲ್ ನಲ್ಲಿ ಡಿಸ್ಕೌಂಟ್ , ಆಫರ್, ಸೀಸನ್ ಸೇಲ್ ಎಂಬ ಬೋರ್ಡ್ ಗಳು ರಾರಾಜಿಸುತ್ತಿರುತ್ತವೆ. ನಿಜಕ್ಕೂ ಅಲ್ಲಿ ಆಪರ್ ಇದೆಯಾ ಡಿಸ್ಕೌಂಟ್ ಸಿಗುತ್ತಾ ಅಂತ ನೋಡಿದ್ರೆ ಅವೆಲ್ಲಾ ಮಾರ್ಕೆಟಿಂಗ್ ಗಿಮಿಕ್ ಗಳು ಅನ್ನೋದು ಸುಲಭವಾಗಿ ಅರ್ಥವಾಗಿ ಹೋಗುತ್ತೆ. ತಿಂಗಳಿಗೆ ಒಂದು ಬಾರಿ ಅನಗತ್ಯ ಶಾಪಿಂಗ್ ಗೆ ಅಂತ ರೂ 2 ಸಾವಿರ ಖರ್ಚು ಮಾಡಿದ್ರೆ ಒಂದು ವರ್ಷಕ್ಕೆ ನೀವು ಬರೋಬ್ಬರಿ ರೂ. 24,000 ವನ್ನು ಅನಗತ್ಯವಾಗಿ ವ್ಯಯಿಸುತ್ತೀರಿ.
2.ಫೇಸ್ ಬುಕ್ ಪೋಸ್ಟ್ ಮಾಡೋಕೆ ಪ್ರವಾಸ ಮಾಡೋದು: ಆಶ್ಚರ್ಯ ಅನಿಸಿದ್ರೂ ಫೇಸ್ ಬುಕ್ ಪೋಸ್ಟ್ ಮಾಡುವ ಸಲುವಾಗಿ ಪ್ರವಾಸ ಮಾಡುವ ಮಂದಿ ನಮ್ಮ ನಡುವೆ ಇದ್ದಾರೆ. ಆ ಪ್ರವಾಸ ಎಷ್ಟು ಅಗತ್ಯವಿತ್ತು? ಆ ಪ್ರವಾಸದಿಂದ ನಿಜಕ್ಕೂ ರಿಲೀಫ್ ಸಿಕ್ತಾ? ಪ್ರವಾಸದಿಂದ ಏನಾದರೂ ಕಲಿಕೆ ಸಾಧ್ಯವಾಯ್ತಾ?ಎಂಬಿತ್ಯಾದಿ ಪ್ರಶ್ನೆಗಳಿಗೆ ಪ್ರವಾಸ ಹೋದವರ ಬಳಿಯೇ ಉತ್ತರ ಇರುವುದಿಲ್ಲ. ಫೇಸ್ ಬುಕ್ ನಲ್ಲಿ ಬೇರೆಯವರು ಏನೆಲ್ಲಾ ಪೋಸ್ಟ್ ಮಾಡುತ್ತಿದ್ದಾರೆ, ನಾವು ಪ್ರವಾಸ ಮಾಡಿ ಪೋಸ್ಟ್ ಮಾಡಬೇಕು ಎನ್ನುವ ಒಂದೇ ಉದ್ದೇಶಕ್ಕೆ ಪ್ರವಾಸಕ್ಕೆ ಹೋಗುವ ಟ್ರೆಂಡ್ ಈಗ ಮುನ್ನೆಲೆಯಲ್ಲಿದೆ. ತಿಂಗಳಿಗೆ ಎರಡು ಸಲ ವಿಕೇಂಡ್ ಟ್ರಿಪ್ ಗೆ ಅಂತ ಹೋದ್ರೂ ಖರ್ಚಿಗೆ ರೂ. 1,000 ದಿಂದ ರೂ. 2,000 ಬೇಕು. ತಿಂಗಳಿಗೆ ಸುತ್ತಾಟಕ್ಕೆ ಅಂತಾನೇ ರೂ. 4,000 ಖರ್ಚು ಮಾಡಿದ್ರೂ ವರ್ಷಕ್ಕೆ ರೂ.48,000 ಬೇಕು.
3.ಕ್ರೆಡಿಟ್ ಕಾರ್ಡ್ ಅನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗೋದು: ಕ್ರೆಡಿಟ್ ಕಾರ್ಡ್ ಅನ್ನೋದು ಬಹಳ ಉಪಯುಕ್ತ ಹಣಕಾಸು ಪ್ರಾಡಕ್ಟ್. ಕ್ರೆಡಿಟ್ ಕಾರ್ಡ್ ನಿಂದ ಸುಮಾರು 45 ದಿನಗಳ ವರೆಗೆ ಸಿಗುವ ಬಡ್ಡಿ ರಹಿತ ಸಾಲದಿಂದ ಎಲ್ಲರಿಗೂ ಅನುಕೂಲ. ಆದರೆ ಬಹುತೇಕರಿಗೆ ಕ್ರೆಡಿಟ್ ಕಾರ್ಡ್ ಸರಿಯಾದ ಬಳಕೆ ತಿಳಿದಿಲ್ಲ. ಕ್ರೆಡಿಟ್ ಕಾರ್ಡ್ ಮಿನಿಮಮ್ ಅಮೌಂಟ್ ಡ್ಯೂ ಪಾವತಿಸುವುದು, ಕ್ರೆಡಿಟ್ ಲಿಮಿಟ್ ಗರಿಷ್ಠ ಬಳಕೆ. ಇಎಂಐ ಪಾವತಿ ವಿಳಂಬ ಮಾಡಿ ದಂಡ ಕಟ್ಟುವುದು, ಕ್ರೆಡಿಟ್ ಕಾರ್ಡ್ ಸ್ಪೈಪ್ ಮಾಡಿ ಎಟಿಎಂ ನಲ್ಲಿ ಹಣ ಡ್ರಾ ಮಾಡುವುದು, ಮಾರಾಟ ಪ್ರತಿನಿಧಿಗಳು ಒತ್ತಾಯ ಮಾಡಿದರು ಎನ್ನುವ ಕಾರಣಕ್ಕೆ ಕ್ರೆಡಿಟ್ ಕಾರ್ಡ್ ಕೊಳ್ಳುವುದು ಹೀಗೆ ಹತ್ತಾರು ತಪ್ಪುಗಳನ್ನು ಬಹುಪಾಲು ಮಂದಿ ಮಾಡುತ್ತಾರೆ. ಈ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಇರುವ ಏಕೈಕ ಮಾರ್ಗ ಕ್ರೆಡಿಟ್ ಕಾರ್ಡ್ ಬಗ್ಗೆ ಸರಿಯಾದ ಮಾಹಿತಿ ಅರಿತು ಅದನ್ನು ಬಳಕೆ ಮಾಡುವುದು.
4.ಯಾರನ್ನೋ ಒಲೈಸೋಕೆ ದುಬಾರಿ ಜೀವನಶೈಲಿ: ನಾವು ಬೇರೆಯವರಿಗಾಗಿ ಬದುಕುವ ಧೋರಣೆ ಬಿಡಬೇಕು. ನಾವು ನಮಗಾಗಿ ಬದುಕುವುದನ್ನು ಕಲಿಯಬೇಕು. ‘ಪಕ್ಕದ ಮನೆಯವಳು ಓಲೆ ತೆಗೆದುಕೊಂಡಳು ಅಂತ ಆಚೆ ಮನೆಯವಳು ಕಿವಿ ಕಿತ್ತುಕೊಂಡಳು’ ಎನ್ನುವ ಗಾದೆ ಮಾತಿದೆ. ಈ ರೀತಿಯ ಮನಸ್ಥಿತಿ ನಮ್ಮದಾಗಬಾರದು. ನಮ್ಮ ಅಗತ್ಯಗಳೇನು? ಯಾವುದಕ್ಕೆ ನಾವು ಖರ್ಚು ಮಾಡಬೇಕು? ಯಾವ ಖರ್ಚು ಅನಗತ್ಯ? ಎನ್ನುವ ವಿವೇಚನೆ ನಮ್ಮದಾಗಿರಬೇಕು. ಬಹುತೇಕ ಸಂದರ್ಭದಲ್ಲಿ ಬೇರೆಯವರು ಏನು ಮಾಡಿದರು? ಏನು ಖರೀದಿಸಿದರು? ಅವರು ಹೇಗೆ ಬದುಕುತ್ತಿದ್ದಾರೆ ? ಅವರನ್ನು ಮೀರಿಸುವಂತೆ ನಾವು ಬದುಕುವುದು ಹೇಗೆ? ಎಂಬಿತ್ಯಾದಿ ವಿಷಯಗಳಿಗೇ ನಾವು ಹೆಚ್ಚು ಆದ್ಯತೆ ನೀಡುತ್ತೇವೆ. ಈ ಓಲೈಕೆ ಜೀವನಶೈಲಿಯಿಂದ ನಷ್ಟವಾಗೋದು ನಿಮಗೆ ಅಂತ ಅರಿವಿರಬೇಕು.
5.ತುರ್ತು ಬಜೆಟ್ ಇಟ್ಟುಕೊಳ್ಳದೆ ಇರೋದು: ಪ್ರತಿಯೊಬ್ಬರೂ ಒಂದಲ್ಲ ಒಂದು ಹಂತದಲ್ಲಿ ಆರ್ಥಿಕ ಮುಗ್ಗಟ್ಟಿನ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಇಂತಹ ಅನಿರೀಕ್ಷಿತ ಸಂದರ್ಭಗಳಿಗಾಗಿ ತುರ್ತು ನಿಧಿ ಬೇಕೇಬೇಕು. ತುರ್ತು ನಿಧಿ ಹಣಕಾಸಿನ ಸಂಕಷ್ಟದ ಪರಿಸ್ಥಿತಿಯಲ್ಲಿ ನಿಮ್ಮನ್ನು ಕಾಪಾಡುವ ಜತೆಗೆ, ಹೂಡಿಕೆಗಳಿಗೆ ಬೇಕಿರುವ ಆ ಕ್ಷಣದ ಅಗತ್ಯ ಆರ್ಥಿಕ ಸಂಪನ್ಮೂಲವನ್ನು ಹೊಂದಿಸಲು ನೆರವಾಗುತ್ತದೆ. ಸರ್ಕಾರಿ ಉದ್ಯೋಗದಲ್ಲಿರುವವರು ತಮ್ಮ ಮೂರು ತಿಂಗಳ ಸಂಬಳವನ್ನು ತುರ್ತು ನಿಧಿಯ ರೂಪದಲ್ಲಿ ಇಟ್ಟುಕೊಂಡರೆ ಒಳಿತು. ಖಾಸಗಿ ಉದ್ಯೋಗದಲ್ಲಿರುವವರು 6 ತಿಂಗಳ ವೇತನವನ್ನು ಇದಕ್ಕೆ ಮೀಸಲಿಡಬಹುದು. ಇನ್ನು ಸ್ವಂತ ಉದ್ಯೋಗ ಹೊಂದಿರುವವರು ಕನಿಷ್ಠ 10 ತಿಂಗಳ ಆದಾಯವನ್ನು ತುರ್ತು ನಿಧಿಗೆ ಮೀಸಲಿಡುವುದು ಒಳಿತು.