ಶಿಕ್ಷಕರು, ಕಲಾವಿದರ ನೆರವಿಗೆ 70 ಕೋಟಿ ಅನುದಾನ ಕೊಡಿ: ಸಿಎಂಗೆ ಜೆಡಿಯು ಆಗ್ರಹ
ಬೆಂಗಳೂರು: ಮಹಾಮಾರಿ ಕೊರೊನಾ ಹಾಗೂ ಲಾಕ್‌ಡೌನ್‌ನಿಂದಾಗಿ ರಾಜ್ಯದ ಬಡವರು, ಶ್ರಮಿಕರು, ನೌಕರರು ಸೇರಿದಂತೆ ಎಲ್ಲಾ ವರ್ಗ ತಲ್ಲಣಗೊಂಡಿದೆ. ಇದರ ಜತೆಗೆ ಶಿಕ್ಷಕರು ಹಾಗೂ ಕಲಾವಿದರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಸಂಕಷ್ಟ ಪರಿಹರಿಸಲು ರಾಜ್ಯ ಸರ್ಕಾರ ಶಿಕ್ಷಕ ಸಮುದಾಯಕ್ಕೆ 50 ಕೋಟಿ ಅನುದಾನ ಹಾಗೂ ಕಲಾವಿದರ ನೆರವಿಗೆ ಬರಲು 20 ಕೋಟಿ ಬಿಡುಗಡೆ ಮಾಡುವಂತೆ ರಾಜ್ಯ ಸಂಯುಕ್ತ ಜನತಾ ದಳದ ರಾಜ್ಯಾಧ್ಯಕ್ಷ ಮಹಿಮಾ ಪಟೇಲ್ ಆಗ್ರಹಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿಪತ್ರ ಸಲ್ಲಿಸಿರುವ ಮಹಿಮಾ ಪಟೇಲ್, ಬಡವರು ಶ್ರಮಿಕರಿಗಾಗಿ ಸರ್ಕಾರ 3 ತಿಂಗಳ ಪಡಿತರ ನೀಡಿ ಸಹಾಯ ಹಸ್ತ ಚಾಚಿದೆ. ಆಟೋ ಚಾಲಕರು, ನೇಕಾರರು, ಸವಿತಾ ಸಮಾಜ ಸೇರಿದಂತೆ ಹಲವು ಸಮುದಾಯಗಳಿಗೆ ವಿಶೇಷ ಅನುದಾನ ನೀಡಿ ಮಾನವೀಯತೆ ಮೆರೆದಿದೆ.
ಆದರೆ, ಇಡೀ ರಾಜ್ಯದಲ್ಲಿ ಇಂದು ನಿರ್ಲಕ್ಷ್ಯಕ್ಕೆ ಒಳಗಾದ ಸಮೂಹವೆಂದರೆ ಶಿಕ್ಷಕರು ಹಾಗೂ ಕಲಾವಿದರು. ರಾಜ್ಯದಲ್ಲಿ ಸುಮಾರು 35,000 ಶಾಲಾ ಶಿಕ್ಷಕರು, ಉಪನ್ಯಾಸಕರು ಕೆಲಸ ಕಳೆದುಕೊಂಡಿದ್ದಾರೆ. ಹಲವು ವರ್ಷಗಳಿಂದ ಪದವಿ ಕಾಲೇಜುಗಳಲ್ಲಿ ಕಡಿಮೆ ವೇತನಕ್ಕೆ ದುಡಿದ ಉಪನ್ಯಾಸಕರು ಸತತ ಮೂರು ತಿಂಗಳಿಂದ ವೇತನವಿಲ್ಲದೆ ಅತಂತ್ರರಾಗಿದ್ದಾರೆ.
ಇವರ ಜತೆಗೆ ಕಲಾವಿದರ ಸಮೂಹ ಕೂಡ ಸಂಕಷ್ಟದಲ್ಲಿದೆ. ಜನಪದ, ರಂಗಭೂಮಿ, ಶಾಸ್ತ್ರೀಯ, ಸಂಗೀತ ಮತ್ತು ನೃತ್ಯ ಕಲಾವಿದರೂ ಕೊರೊನಾದಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ನೊಂದ ಶಿಕ್ಷಕ ಸಮೂಹಕ್ಕೆ 50 ಕೋಟಿ ಹಾಗೂ ಕಲಾವಿದರಿಗಾಗಿ 20 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಮಹಿಮಾ ಪಟೇಲ್ ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ.