ಆಲ್‌ರೌಂಡರ್ ಜೆಸ್ಸಿ
ಜಸ್ವಂತ್ ಮುರಳೀಧರ ಆಚಾರ್ಯ… ಗೆಳೆಯರ ಪಾಲಿಗೆ ಪ್ರೀತಿಯ ಜೆಸ್ಸಿ… ರಾಜ್ಯ ಕ್ರಿಕೆಟ್ ನಲ್ಲಿ ಸದ್ದು ಮಾಡುತ್ತಿರುವ ಜಸ್ವಂತ್ ಭರವಸೆಯ ಆಟಗಾರ. ಇತ್ತೀಚೆಗೆ ನಡೆದ ಕೆಎಸ್‍ಸಿಎ 2ನೇ ಗ್ರೂಪ್, ಫಸ್ಟ್ ಡಿವಿಷನ್ ಮ್ಯಾಚ್‍ನಲ್ಲಿ ಸ್ಪೋಟಕ ಬ್ಯಾಟಿಂಗ್ ಮೂಲಕ ಮಿಂಚು ಹರಿಸಿದ್ದರು.
ಆರ್‍ಎಸ್‍ಐ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ನೈರುತ್ಯ ರೈಲ್ವೆ ತಂಡದ ಪರ ಮಿಂಚಿನ ಅಜೇಯ ಶತಕ ಕೂಡ ದಾಖಲಿಸಿದ್ದರು. ಕಸ್ಟಮ್ಸ್ ಮತ್ತು ಸೆಂಟ್ರಲ್ ಎಕ್ಸೈಸ್ ತಂಡದ ಅಗ್ರ ಕ್ರಮಾಂಕದ ಆಟಗಾರನಾಗಿರುವ ಜಸ್ವಂತ್ ಅವರ ಬ್ಯಾಟಿಂಗ್ ವೈಖರಿಗೆ ಎದುರಾಳಿ ನೈರುತ್ಯ ರೈಲ್ವೆ ಹುಬ್ಬಳ್ಳಿ ತಂಡದ ಬೌಲರ್‍ಗಳು ದಂಗಾಗಿಬಿಟ್ಟಿದ್ದರು. 11 ಸಿಕ್ಸರ್ ಹಾಗೂ 8 ಬೌಂಡರಿಗಳನ್ನು ಸಿಡಿಸಿದ್ದ ಜಸ್ವಂತ್ ಅಜೇಯ 144 ರನ್ ದಾಖಲಿಸಿದ್ದರು. ಮತ್ತೊಂದೆಡೆ ಜಸ್ವಂತ್‍ಗೆ ಸಾಥ್ ನೀಡಿದ್ದ ಬಿ.ಎ. ಮೋಹಿತ್ ಕೂಡ ಅಜೇಯ 117 ರನ್ ಗಳಿಸಿದ್ದರು. ಈ ಮೂಲಕ ಕಸ್ಟಮ್ಸ್ ಮತ್ತು ಸೆಂಟ್ರಲ್ ಎಕ್ಸೈಸ್ ತಂಡ 9 ವಿಕೆಟ್‍ಗಳ ಭರ್ಜರಿ ಜಯ ದಾಖಲಿಸಿತ್ತು.
ಮೊದಲು ಬ್ಯಾಟಿಂಗ್ ಮಾಡಿದ್ದ ನೈರುತ್ಯ ರೈಲ್ವೆ ಹುಬ್ಬಳ್ಳಿ ತಂಡ 49.5 ಓವರ್‍ಗಳಲ್ಲಿ 288 ರನ್‍ಗಳಿಗೆ ತನ್ನೆಲ್ಲಾ ವಿಕೆಟ್‍ಗಳನ್ನು ಕಳೆದುಕೊಂಡಿತ್ತು. ಕಠಿಣ ಸವಾಲನ್ನು ಬೆನ್ನಟ್ಟಿದ್ದ ಕಸ್ಟಮ್ಸ್ ಮತ್ತು ಸೆಂಟ್ರಲ್ ತಂಡ ಕೇವಲ 35.2 ಓವರ್‌ಗಳಲ್ಲಿ ಕೇವಲ ಒಂದು ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತ್ತು. ಈ ಪಂದ್ಯದಲ್ಲಿ ಜಸ್ವಂತ್ ಆಚಾರ್ಯ ಅವರ ಮನಮೋಹಕ ಆಟ ಎಲ್ಲರ ಗಮನ ಸೆಳೆಯಿತ್ತು. ಎದುರಾಳಿ ಬೌಲರ್‍ಗಳನ್ನು ಮನಬಂದಂತೆ ದಂಡಿಸಿದ್ದ ಜೆಸ್ಸಿಯ ಅಬ್ಬರದ ಆಟ ನಿಬ್ಬೆರಗಾಗುವಂತೆ ಮಾಡಿತ್ತು.
21ರ ಹರೆಯದ ಜಸ್ವಂತ್ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಸಾಕಷ್ಟು ಭರವಸೆ ಮೂಡಿಸಿದ್ದಾರೆ. ತನ್ನ ಆರರ ಹರೆಯದಲ್ಲೇ ಕ್ರಿಕೆಟ್ ಗ್ಲಾಮರ್‍ಗಳನ್ನು ಕಲಿಯಲು ಶುರು ಮಾಡಿದ್ದ ಜೆಸ್ಸಿ, ಕೆಎಸ್‍ಸಿಎ ವಿವಿಧ ವಯೋಮಿತಿ ಟೂರ್ನಿಗಳಲ್ಲೂ ಆಡಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದರು. 2015ರ ವಿಜಯ ಮರ್ಚಂಟ್ ಟೂರ್ನಿಯಲ್ಲಿ ರಾಜ್ಯ 16ರ ವಯೋಮಿತಿ ತಂಡವನ್ನು ಪ್ರತಿನಿಧಿಸಿದ್ದರು. ಅಂದ ಹಾಗೇ ಜಸ್ವಂತ್ ಅವರ ಕ್ರಿಕೆಟ್ ಕಲಿಕೆಗೆ ಪ್ರೋತ್ಸಾಹ ನೀಡಿದ್ದು ಪ್ರತಿಷ್ಠಿತ ಬೆಂಗಳೂರಿನ ಜೈನ್ ಯುನಿವರ್ಸಿಟಿ. ಅಲ್ಲದೆ ದಕ್ಷಿಣ ವಲಯ ಯೂನಿವರ್ಸಿಟಿ ಮತ್ತು ಬಿಸಿಸಿಐ ಆಯೋಜನೆಯ ಅಖಿಲ ಭಾರತ ಯೂನಿವರ್ಸಿಟಿ ವಿಝ್ ಟ್ರೋಫಿ ಟೂರ್ನಿಯಲ್ಲೂ ಆಡಿರುವ ಹೆಗ್ಗಳಿಕೆ ಇವರದ್ದು.
ಸದ್ಯ ಜಸ್ವಂತ್, ಕರ್ನಾಟಕ ಇನ್ಸಿಸ್ಟಿಟ್ಯೂಟ್ ಆಫ್ ಕ್ರಿಕೆಟ್ ನಲ್ಲಿ (ಕೆಐಒಸಿ) ತರಬೇತಿ ಪಡೆಯುತ್ತಿದ್ದಾರೆ. ಕೆಐಒಸಿ ಈಗಾಗಲೇ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರನ್ನು ಕೊಡುಗೆಯಾಗಿ ನೀಡಿದ್ದ ಅಕಾಡೆಮಿಯೂ ಹೌದು. 2016ರಲ್ಲಿ ಕೆಪಿಎಲ್ ಟೂರ್ನಿಯಲ್ಲಿ ಬಳ್ಳಾರಿ ಟಸ್ಕರ್ಸ್ ಮತ್ತು 2017ರಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡದ ಪರ ಆಡಿದ್ದಾರೆ. ಹಾಗೇ 2018ರಲ್ಲಿ ನಡೆದ ಕಾಲೇಜ್ ಪ್ರೀಮಿಯರ್ ಲೀಗ್ ನಲ್ಲಿ ಬೆಸ್ಟ್ ಬ್ಯಾಟ್ಸ್ ಮೆನ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಇನ್ನು ಜಸ್ವಂತ್ ಕನಸುಗಾರ. ಬದುಕಿನಲ್ಲಿ ತನ್ನದೇ ಆದ ಕೆಲವೊಂದು ತತ್ವ ಸಿದ್ದಾಂತಗಳನ್ನು ಅಳವಡಿಸಿಕೊಂಡಿದ್ದಾರೆ. ತಾನೂ ಹೀಗೆ ಇರಬೇಕು, ಹೀಗೆ ಬದುಕಬೇಕು, ಯಾರು ಏನು ಬೇಕಾದ್ರೂ ಹೇಳಲಿ, ನಾನು ಇರುವುದೇ ಹೀಗೆ ಎಂಬುದನ್ನು ಜೀವನದಲ್ಲಿ ಪರಿಪಾಲಿಸಿಕೊಂಡು ಬರುತ್ತಿದ್ದಾರೆ. ಬಾಲ್ಯದಲ್ಲಿ ಜಸ್ವಂತ್‍ಗೆ ಹೆಚ್ಚಿನ ಗೆಳೆಯರು ಇರಲಿಲ್ಲ. ಹೀಗಾಗಿಯೇ ಜಸ್ಸಿಯ ಹೆತ್ತವರು ಕ್ರಿಕೆಟ್ ತರಬೇತಿಗೆ ಕೆಐಒಸಿಗೆ ಸೇರಿಸಿದ್ದರು. ಅಲ್ಲಿ ಜಸ್ಸಿಗೆ ಹೊಸ ಸ್ನೇಹಿತರು ಸಿಕ್ಕಿದ್ದರು, ಹಾಗೇ ಅವರ ಜೊತೆ ಜಗಳ ಮಾಡಿಕೊಳ್ಳುವುದು ಮಾಮೂಲಿಯಾಗಿಬಿಟ್ಟಿತ್ತು. ಅದಕ್ಕಿಂತ ಮಿಗಿಲಾಗಿ ಒಳ್ಳೆಯ ಗುರು ಸಿಕ್ಕಿದ್ದರು. ಇರ್ಫಾನ್ ಸೇಠ್ ಗರಡಿಯಲ್ಲಿ ಪಳಗಿದ್ದ ಜಸ್ವಂತ್, ಕ್ರಿಕೆಟ್‍ನ ಗ್ರಾಮರ್‍ಗಳನ್ನು ಬಲುಬೇಗನೇ ಕಲಿತುಕೊಂಡರು.
ಕ್ರಿಕೆಟ್ ಮೇಲೆ ಅಪಾರ ಆಸಕ್ತಿಯನ್ನು ಬೆಳೆಸಿಕೊಂಡ ಜೆಸ್ಸಿಗೆ ಮನೆಯಲ್ಲೂ ಕೊಂಚ ಮಟ್ಟಿನ ಒತ್ತಡವಿತ್ತು. ಕ್ರಿಕೆಟ್ ಜೊತೆ ಶಿಕ್ಷಣದ ಕಡೆಗೂ ಗಮನ ಕೊಡಬೇಕು ಅನ್ನೋದು ಹೆತ್ತವರ ಅಭಿಲಾಷೆಯಾಗಿತ್ತು. ಅದಕ್ಕೆ ತಕ್ಕಂತೆ ಜಸ್ವಂತ್ ಪ್ಲಾನ್ ಕೂಡ ಮಾಡಿಕೊಳ್ಳುತ್ತಿದ್ದರು. ಕ್ರಿಕೆಟ್‍ಗೆ ಶೇ.100ರಷ್ಟು ಆದ್ಯತೆ ನೀಡುತ್ತಿದ್ದರೂ, ಶಿಕ್ಷಣಕ್ಕೂ ಸಮಯ ಮೀಸಲಿಡುತ್ತಿದ್ದರು. ಹೀಗಾಗಿ ಶೈಕ್ಷಣಿಕವಾಗಿಯೂ ಶೇ.80ರಷ್ಟು ಅಂಕಗಳನ್ನು ಪಡೆಯುತ್ತಿದ್ದರು ಜೆಸ್ಸಿ. ಜೈನ್ ಕಾಲೇಜ್‍ನ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥರಾದ ಡಾ. ಶಂಕರ್ ಅವರು ತುಂಬಾನೇ ಪ್ರೋತ್ಸಾಹ ನೀಡುತ್ತಿದ್ದರು. ಅದೇ ರೀತಿ ಪ್ರೀತಿಯ ಗೆಳೆಯ ಅಮೋಘ ಸೊಂಡೂರ್ ಪರೀಕ್ಷೆಯ ವೇಳೆಯ ಸಹಾಯ ಮಾಡುತ್ತಿದ್ದ ಎಂಬುದನ್ನು ನೆನಪಿಸಿಕೊಳ್ಳಲು ಮರೆಯುವುದಿಲ್ಲ ಜಸ್ವಂತ್.
ಈ ನಡುವೆ, ಕ್ರಿಕೆಟ್ ಜೊತೆ ಜೊತೆಗೆ ಫಿಟ್ ನೆಸ್ ಕಡೆಗೂ ಗಮನ ಹರಿಸುತ್ತಿದ್ದರು. ಆದ್ರೆ ತಿನ್ನುವುದರಲ್ಲಿ ಕಮ್ಮಿ ಏನು ಇಲ್ಲ. ಆದ್ರೆ ಕಳೆದ ಎರಡು ವರ್ಷಗಳಿಂದ ಫಿಟ್‍ನೆಸ್ ಕಡೆಗೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ. ಹಾಗೇ ಪ್ರತಿದಿನ ಜಸ್ವಂತ್ ಅವರು ನಿರ್ದಿಷ್ಟವಾದ ಗುರಿಯನ್ನು ಇಟ್ಟುಕೊಂಡಿದ್ದಾರೆ. ಕ್ರಿಕೆಟ್ ಮತ್ತು ಫಿಟ್‍ನೆಸ್‍ಗೆ ಪ್ರಾಮಾಣಿಕವಾಗಿ ಹಾಗೂ ಬದ್ಧತೆಯಿಂದ ಪರಿಶ್ರಮವನ್ನು ಹಾಕುವುದು. ತೊಂದರೆಯಲ್ಲಿರುವ ಕನಿಷ್ಠ ಇಬ್ಬರಿಗೆ ಸಹಾಯ ಮಾಡುವುದು. ಹಾಗೇ ಎರಡು ಪ್ರಾಣಿಗಳಿಗೆ ನೆರವು ನೀಡುವುದು ಹೀಗೆ ತನ್ನ ದೈನದಿಂನ ಬದುಕಿನಲ್ಲಿ ಜಸ್ವಂತ್ ತತ್ವ ಸಿದ್ಧಾಂತಗಳನ್ನು ಪಾಲಿಸಿಕೊಂಡು ಬರುತ್ತಿದ್ದಾರೆ.
ಇನ್ನು ಜಸ್ವಂತ್ ಒಬ್ಬನೇ ಮಗ. ಹೀಗಾಗಿ ಅಪ್ಪ -ಅಮ್ಮನ ಮುದ್ದಿನ ಕಂದ. ತನ್ನ ಯಶಸ್ಸಿನ ಹಿಂದೆ ಹೆತ್ತವರ ಶ್ರಮ ಸಾಕಷ್ಟಿದೆ. ಹಾಗೇ ಜೆಸ್ಸಿಯ ಸಾಮರ್ಥದ ಬಗ್ಗೆ ಅಪಾರವಾದ ನಂಬಿಕೆಯೂ ಅವರ ಹೆತ್ತವರಿಗಿದೆ. ತನಗೆ ಏನು ಬೇಕೋ ಅದು ತಕ್ಷಣವೇ ಕೊಡುವಂತಹ ಅಪ್ಪ -ಅಮ್ಮ ನನಗಿದ್ದಾರೆ. ಪ್ರತಿಯೊಬ್ಬರನ್ನು ಗೌರವಿಸಬೇಕು ಅನ್ನೋದನ್ನು ಮನದಟ್ಟು ಮಾಡಿಕೊಟ್ಟಿದ್ದಾರೆ. ಹೀಗಾಗಿ ನನಗೆ ಬದುಕಿನಲ್ಲಿ ಏಕಾಂಗಿ ಭಾವನೆ ಯಾವತ್ತೂ ಬಂದಿಲ್ಲ. ಒಂದು ರೀತಿಯಲ್ಲಿ ನಾನು ಅದೃಷ್ಟವಂತ ಅಂತ ಹೆಮ್ಮೆಯಿಂದಲೇ ಹೇಳಿಕೊಳ್ಳುತ್ತಾರೆ ಜಸ್ವಂತ್. ಇದೇ ವೇಳೆ ತಮ್ಮ ಮೂವರು ಕುಟುಂಬದ ಜೊತೆ ಪ್ರೀತಿಯ ನಾಯಿ ಮೆಸ್ಸಿ ಕೂಡ ನಮ್ಮ ಕುಟುಂಬದ ಸದಸ್ಯನಾಗಿದ್ದಾನೆ ಅಂತಾರೆ ಜೆಸ್ಸಿ.
ಕ್ರಿಕೆಟ್‍ನ ಹೊರತಾಗಿ ಸಾಕಷ್ಟು ಹವ್ಯಾಸಗಳನ್ನು ಜಸ್ವಂತ್ ಬೆಳೆಸಿಕೊಂಡಿದ್ದಾರೆ. ಕ್ರಿಕೆಟ್, ಫಿಟ್‍ನೆಸ್, ಮಾಡೆಲಿಂಗ್ ರಂಗದ ಕಡೆಗೂ ಆಸಕ್ತಿ ಇದೆ. ಉದ್ಯಮ, ಅಡುಗೆ, ಒಬ್ಬಂಟಿಯಾಗಿ ಟ್ರಾವೆಲಿಂಗ್ ಮಾಡುವುದು, ಸಿನಿಮಾ ಹೀಗೆ ಪ್ರತಿಯೊಂದು ವಿಷಯ, ವಿಚಾರಗಳನ್ನು ತಿಳಿದುಕೊಳ್ಳುವಂತಹ ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ.
ಒಟ್ಟಾರೆ, ಜಸ್ವಂತ್ ಕ್ರಿಕೆಟ್ ಆಟಗಾರನಾಗಿ, ಫಿಟ್‍ನೆಸ್ ಗುರುವಾಗಿ, ಮಾಡೆಲಿಂಗ್ ಯುವಕನಾಗಿ, ಪ್ರಾಣಿ ಪ್ರಿಯನಾಗಿ, ಸಹಾಯ ಹಸ್ತ ನೀಡುವಂತಹ ಹೃದಯವಂತನಾಗಿ, ಹೊಸ ಹೊಸ ಯೋಚನೆಗಳ ಮೂಲಕ ಕನಸುಗಾರನಾಗಿ ಬದುಕಿನಲ್ಲಿ ಯಾವುದು ಅಸಾಧ್ಯವೋ ಅದು ಸಾಧ್ಯ ಅಂತ ಸಾಬಿತುಪಡಿಸುಂತಹ ಛಲಗಾರನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆಲ್ ದಿ ಬೆಸ್ಟ್ ಜೆಸ್ಸಿ